ಕೆಲ ದಿನಗಳ ಕಾಲ ತಣ್ಣಗಾಗಿದ್ದ ಮಳೆರಾಯ ಇದೀಗ ಮತ್ತೆ ಅಬ್ಬರಿಸಲು ಆರಂಭ ಮಾಡಿದ್ದಾನೆ. ಮಲೆನಾಡಿನ ವಿವಿಧ ಪ್ರದೇಶಗಳಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಿದೆ. 

ಬೆಂಗಳೂರು: ಕಳೆದ ಎರಡು- ಮೂರು ದಿನಗಳಿಂದ ರಾಜ್ಯಾದ್ಯಂತ ಬಿಡುವು ನೀಡಿದ ಮಳೆ ಮಲೆನಾಡು ಪ್ರದೇಶದಲ್ಲಿ ಮತ್ತೆ ಚುರುಕುಗೊಂಡಿದೆ. ಶೃಂಗೇರಿ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗಿದ್ದರೆ, ಶಿವಮೊಗ್ಗ, ಕೊಡಗು, ಉತ್ತರ ಕನ್ನಡದ ಮಲೆನಾಡು ಪ್ರದೇಶದಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ನಿಲ್ಲದ ಕಾರಣ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಜಲಾವೃತವಾಗಿರುವ ಪ್ರದೇಶಗಳು ಹಾಗೆಯೇ ಇವೆ. ಕರಾವಳಿ ಪ್ರದೇಶದಲ್ಲಿಯೂ ಸಾಧಾರಣ ಮಳೆ ಕಂಡುಬಂದಿದೆ. 

ಬೆಳಗಾವಿ ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರೂ ಕೃಷ್ಣಾ ನದಿ ತೀರ ಪ್ರದೇಶ ವ್ಯಾಪ್ತಿಯಲ್ಲಿ ಮುಳು ಗಡೆಯಾಗಿದ್ದ 13 ಸೇತುವೆಗಳು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ರಾಯಬಾಗ ತಾಲೂಕಿನ ಶಿರಗೂರ ಮತ್ತು ಗುಂಡವಾಡ ಗ್ರಾಮಗಳ ರೈತರ ಗದ್ದೆಗಳಲ್ಲಿ ನೀರು ನುಗ್ಗಿದ್ದರಿಂದ ಸಾಕಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ. ಕೃಷ್ಣಾ ನದಿ ತೀರದಲ್ಲಿರುವ ಇವೆರಡೂ ಗ್ರಾಮಗಳು ಭಾಗಶಃ ಮುಳುಗಡೆ ಆಗಿದೆ. ಹೀಗಾಗಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.