ಬೆಂಗಳೂರು :  ಕೇರಳ ಮತ್ತು ಪಶ್ಚಿಮಘಟ್ಟಪ್ರದೇಶದಲ್ಲಿ ಬಿಡದೆ ಸುರಿಯುತ್ತಿರುವ ಮಳೆಗೆ ಕಪಿಲಾ ನದಿ ಉಕ್ಕಿಹರಿದು ಮೈಸೂರು ಭಾಗದಲ್ಲಿ ನದಿ ತಟದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕಬಿನಿ ಜಲಾಶಯಕ್ಕೆ ದಾಖಲೆ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದ್ದು, ತಗ್ಗುಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಕಾಣಿಸಿಕೊಂಡಿದೆ. ಮೈಸೂರು-ಊಟಿ ಮಾರ್ಗ ಸಂಪರ್ಕ ಕಡಿತಗೊಂಡಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.

82 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ:  ಕೇರಳದ ವಯನಾಡು ಪ್ರದೇಶದಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಕಬಿನಿ ಜಲಾಶಯಕ್ಕೆ 79 ಸಾವಿರ ಕ್ಯುಸೆಕ್‌ ನೀರು ಒಳಹರಿವು ಬರುತ್ತಿದೆ. ಮುಂಜಾಗೃತಾ ಕ್ರಮವಾಗಿ 82 ಸಾವಿರ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕಬಿನಿಯಿಂದ ಇಷ್ಟೊಂದು ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ನಂಜನಗೂಡು ಪಟ್ಟಣದ ಹಳ್ಳದಕೇರಿ ಬೀದಿಯ 6 ಮನೆಗಳು ಜಲಾವೃತಗೊಂಡಿದೆ. ಸರಸ್ವತಿ ಕಾಲೋನಿ, ವಕ್ಕಲಗೇರಿ, ತೋಪಿನ ಬೀದಿ, ಚಾಮಲಾಪುರದ ಬೀದಿಯ ಮನೆಗಳಿಗೆ ನೀರು ನುಗ್ಗಿದೆ.

ಮೈಸೂರು, ನಂಜನಗೂಡಿನ ಹೆದ್ದಾರಿಯ ಮಲ್ಲನಮೂಲೆಯ ಬಳಿ ರಸ್ತೆಗೆ ನೀರು ನುಗ್ಗಿ ರಸ್ತೆಯಲ್ಲಿ ಸುಮಾರು 4 ಅಡಿಗಳಷ್ಟುನೀರು ನಿಂತಿದೆ. ಹೀಗಾಗಿ ಶುಕ್ರವಾರ ಮುಂಜಾನೆಯಿಂದಲೇ ಜಿಲ್ಲಾಡಳಿತ ರಸ್ತೆ ಸಂಚಾರ ಸ್ಥಗಿತಗೊಳಿಸಿದೆ. ಬದಲಿ ಮಾರ್ಗ ಸೂಚಿಸಲಾಗಿದ್ದು, ಈ ಈ ಮಾರ್ಗದಲ್ಲಿ ಶನಿವಾರದವರೆಗೂ ನಿರ್ಬಂಧ ಮುಂದುವರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಏತನ್ಮಧ್ಯೆ ಸುತ್ತೂರು-ಮೈಸೂರು ಸಂಪರ್ಕ ರಸ್ತೆಯೂ ಕಡಿತಗೊಂಡಿದೆ. ಈ ಮಾರ್ಗದಲ್ಲಿನ ಪ್ರಮುಖ ಸೇತುವೆ ಮೇಲೆ ಮೂರು ಅಡಿಯಷ್ಟುಎತ್ತರದಲ್ಲಿ ನೀರು ಹರಿಯುತ್ತಿದೆ.

ಶಾಲೆಗೆ ನುಗ್ಗಿದ ನೀರು:  ನಂಜನಗೂಡಿನ ಮೇದರಗೇರಿಯ ಶಾಲೆಗೆ ನೀರು ನುಗ್ಗಿ ಜಲಾವೃತ್ತಗೊಂಡ ಹಿನ್ನೆಲೆಯಲ್ಲಿ ಬಿಇಒ ಆದೇಶದ ಮೇರೆಗೆ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ನಂಜನಗೂಡಿನ ಲಿಂಗಾಭಟ್ಟರ ಗುಡಿ ಬಳಿಯ ಸ್ಮಶಾನಗಳು, ಪರಶುರಾಮ ದೇವಾಲಯದ ಬಳಿಯ ಸ್ಮಶಾನಗಳಿಗೆ ನೀರು ನುಗ್ಗಿದ್ದರಿಂದಾಗಿ ಚಾಮಲಾಪುರದ ಬೀದಿಯಲ್ಲಿ ಶವ ಸಂಸ್ಕಾರಕ್ಕೂ ಪರದಾಡುವಂತಾಗಿತ್ತು. ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟ, 16 ಕಲ್ಲುಮಂಟಪ, ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ, ದತ್ತಾತ್ರೇಯಸ್ವಾಮಿ ದೇವಾಲಯ, ಪರಶುರಾಮ ದೇವಾಲಯ, ಸಂಪೂರ್ಣವಾಗಿ ನೀರಿನಿಂದ ಆವೃತ್ತವಾಗಿದ್ದು, ಆತಂಕ ಸೃಷ್ಟಿಸಿದೆ. ಇನ್ನು ನದಿ ತಟದ ಚಾಮುಂಡೇಶ್ವರಿ ದೇವಾಲಯಕ್ಕೂ ನೀರು ನುಗ್ಗಿದೆ.

ನುಗು ಡ್ಯಾಂನಿಂದ ನೀರು ಹೊರಕ್ಕೆ:  ಎಚ್‌.ಡಿ.ಕೋಟೆ ತಾಲೂಕಿನ ನುಗು ಜಲಾಶಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ 3500 ಕ್ಯುಸೆಕ್‌ ನೀರು ಎಲ್ಲಾ ಕ್ರೆಸ್ಟ್‌ಗೇಟ್‌ ಮೂಲಕ ನದಿಗೆ ಬಿಡಲಾಗುತ್ತಿದೆ. ಈ ಜಲಾಶಯಕ್ಕೆ ಪ್ರತಿದಿನ 3500 ಕ್ಯುಸೆಕ್‌ ನೀರು ಬರುತ್ತಿದೆ. ಕಳೆದ 15 ದಿನಗಳ ಹಿಂದೆ ಜಲಾಶಯ ಭರ್ತಿಯಾಗಿ ಎರಡು ಕ್ರೆಸ್ಟ್‌ಗೇಟ್‌ ಮೂಲಕ ನೀರು ಹೋಗುತ್ತಿದೆ.


ಕೊಡಗಲ್ಲಿ ತಗ್ಗಿದ ಪ್ರವಾಹ, ದ.ಕ.ದಲ್ಲಿ ಶಾಲೆಗೆ ರಜೆ

ಕೊಡಗು ಜಿಲ್ಲೆಯ ಘಟ್ಟಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮುಂಗಾರಿನ ಅಬ್ಬರ ಕ್ಷೀಣವಾಗಿದ್ದರಿಂದ ಕಾವೇರಿ ಸೇರಿದಂತೆ ಈ ಭಾಗದ ಪ್ರಮುಖ ನದಿಗಳಲ್ಲಿ ಪ್ರವಾಹ ಸ್ಥಿತಿ ತಗ್ಗಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಪುನರಾರಂಭಗೊಂಡಿದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಂಗಳೂರು ನಗರದಲ್ಲಿ ಕೃತಕ ನೆರೆ ಸೃಷ್ಟಿಸಿದೆ. ಜಿಲ್ಲೆಯಾದ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ ಶನಿವಾರ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳಿಗೆ ರಜೆ ಸಾರಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಬ್ರಹ್ಮಣ್ಯದಲ್ಲೂ ತಗ್ಗಿದ ಆತಂಕ:  ನೇತ್ರಾವತಿ, ಕುಮಾರಧಾರಾ ನದಿಗಳು ಕಳೆದೆರಡು ದಿನಗಳಿಂದ ಉಕ್ಕಿಹರಿಯುತ್ತಿದ್ದ ಹಿನ್ನೆಲೆಯಲ್ಲಿ ಕುಕ್ಕೆಸುಬ್ರಹ್ಮಣ್ಯದ ಸ್ನಾನಘಟ್ಟಸಂಪೂರ್ಣ ಜಲಾವೃತವಾಗಿತ್ತು. ಇದರಿಂದ ಸ್ಥಳೀಯರಲ್ಲಿ ಆತಂಕ ಕಾಣಸಿಕೊಂಡಿತ್ತು. ಆದರೆ, ಗುರುವಾರ ರಾತ್ರಿಯಿಂದಲೇ ನದಿಯಲ್ಲಿ ನೀರಿನ ಮಟ್ಟತಗ್ಗಿದೆ. ಈ ನಡುವೆ, ಪದೇ ಪದೆ ಗುಡ್ಡಕುಸಿತದಿಂದಾಗಿ ಅಸ್ತವ್ಯಸ್ತಗೊಂಡಿದ್ದ ಮಂಗಳೂರು- ಬೆಂಗಳೂರು ರೈಲು ಸಂಚಾರ ಶುಕ್ರವಾರ ಯತಾರೀತಿ ಪುನಾರಂಭಗೊಂಡಿದೆ.