ರಾಜ್ಯದಲ್ಲಿ ಆರಿದ್ರಾ ಅಬ್ಬರ : ಉಕ್ಕಿ ಹರಿಯುತ್ತಿವೆ ನದಿಗಳು

Heavy Rain In Coastal And Malnad Region
Highlights

ಆರಿದ್ರಾ ಮಳೆಯ ಆರ್ಭಟದಿಂದಾಗಿ ರಾಜ್ಯದ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಜಿಲ್ಲೆಗಳು ತತ್ತರಿಸಿವೆ. ಆ ಭಾಗದ ಕೆಲ ನದಿಗಳು ಅಪಾಯ ಮಟ್ಟಕ್ಕೆ ತಲುಪಿವೆ.

ಬೆಂಗಳೂರು :  ಆರಿದ್ರಾ ಮಳೆಯ ಆರ್ಭಟದಿಂದಾಗಿ ರಾಜ್ಯದ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಜಿಲ್ಲೆಗಳು ತತ್ತರಿಸಿವೆ. ಆ ಭಾಗದ ಕೆಲ ನದಿಗಳು ಅಪಾಯ ಮಟ್ಟಕ್ಕೆ ತಲುಪಿವೆ. ವ್ಯಕ್ತಿಯೊಬ್ಬ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಮಳೆಯಿಂದಾಗಿ ಸಿಡಿಲು ಬಡಿದು ಮೂವರು ಗಾಯಗೊಂಡಿದ್ದಾರೆ. 20ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ. ಅಡಕೆ ಸಸಿಗಳು ಕೊಚ್ಚಿಹೋಗಿವೆ. ಹಲವು ಸೇತುವೆಗಳು ನದಿ ಪ್ರವಾಹದಲ್ಲಿ ಮುಳುಗಿವೆ.

ಕೊಡಗು ಜಿಲ್ಲೆಯ ಬಾಗಮಂಡಲ ಎರಡನೇ ಬಾರಿಗೆ ತುಂಬಿತ್ತು. ಇನ್ನು ಆಗುಂಬೆ 7ನೇ ತಿರುವಿನಲ್ಲಿ ತಡೆಗೋಡೆ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳ ಏರಿಳಿತ ಹೆಚ್ಚಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಹೊರನಾಡು- ಕಳಸ ಸಂಪರ್ಕ ಕಡಿತಗೊಂಡಿದೆ.

ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಹೆಚ್ಚಿತ್ತು. ಆಗುಂಬೆಯಲ್ಲಿ ಅತೀ ಹೆಚ್ಚು, ಭಾಗಮಂಡಲ, ಭಟ್ಕಳಗಳಲ್ಲಿ ಹೆಚ್ಚು ಮಳೆ ಸುರಿದಿದೆ. ಬೆಳಗಾವಿಯಲ್ಲಿ ಸಾಧಾರಣ, ಹಾವೇರಿ, ಧಾರವಾಡಗಳಲ್ಲಿ ಜಿಟಿ ಜಿಟಿ ಮಳೆಯಾಗಿದೆ.

ವ್ಯಕ್ತಿ ತುಂಗಾ ಪಾಲು?:  ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವ್ಯಾಪ್ತಿಯ ಹೊಳೆಹೊದ್ದು ಗ್ರಾಮದಲ್ಲಿ ತುಂಗಾ ನದಿಯಲ್ಲಿ ತೋಟವೊಂದು ಮುಳುಗಿದ್ದು, ಉಮೇಶ್‌ (52) ಕೊಚ್ಚಿ ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಕಾರವಾರದ ಸಿದ್ದಾಪುರದ ಅಣಲೆಬೈಲ್‌ನಲ್ಲಿ ಮನೆ ಕುಸಿದು, ರಾಮಚಂದ್ರ ಗೌಡ (25) ಗಾಯಗೊಂಡಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ನೂಜಾಡಿ ಗ್ರಾಮದಲ್ಲಿ ಕೊಟ್ಟಿಗೆಗೆ ಸಿಡಿಲು ಬಿಡಿದು ಕರುವೊಂದು ಮೃತಪಟ್ಟಿದೆ. ಹಕ್ಲಾಡಿ ಗ್ರಾಮದಲ್ಲಿ ಸಿಡಿಲು ಬಡಿದು ತಾಯಿ- ಮಗಳು ಗಾಯಗೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 20 ಮನೆಗಳು ಕುಸಿದಿವೆ.

ಕುಸಿದ ಘಾಟಿ:  ಶಿವಮೊಗ್ಗ ಜಿಲ್ಲೆಯ ಆಗುಂಬೆ ಘಾಟಿ (ರಾಷ್ಟ್ರೀಯ ಹೆದ್ದಾರಿ-109ಎ) ರಸ್ತೆಯ ನಾಡ್ಪಾಲು ಗ್ರಾಮದ ಸಮೀಪದ 7ನೇ ತಿರುವಿನಲ್ಲಿ 40 ಮೀಟರ್‌ ಉದ್ದಕ್ಕೆ ಬಿರುಕು ಬಿಟ್ಟು, ಮಣ್ಣು ಪಕ್ಕದ ಕಾಡಿನೊಳಗೆ ಕುಸಿದಿದೆ. ಪ್ರದೇಶ ಉಡುಪಿ ಜಿಲ್ಲೆ ಹೆಬ್ರಿ ತಾಲೂಕು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕುಗಳ ಗಡಿ ಪ್ರದೇಶವಾಗಿದೆ. ಈ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು. ಲಘು ವಾಹನಗಳಷ್ಟೇ ಸಂಚರಿಸುತ್ತಿವೆ. ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ-ಹೊರನಾಡು ನಡುವೆ ಭದ್ರಾ ನದಿಗೆ ಕಟ್ಟಿರುವ ಸಂಪರ್ಕ ಸೇತುವೆ ಮೇಲೆ 4 ಅಡಿ ನೀರು ಮೇಲಕ್ಕೆ ಉಕ್ಕಿ ಹರಿಯುತ್ತಿದೆ. ಹೊರನಾಡಿಗೆ ಹೋಗುವ ಸರ್ಕಾರಿ ಬಸ್‌ಗಳು ಕಳಸದಲ್ಲಿಯೇ ನಿಲುಗಡೆ ಮಾಡಿದವು. ಹದಿನೈದು ದಿನಗಳ ಅವಧಿಯಲ್ಲಿ ಸತತ ಮೂರನೇ ಬಾರಿಗೆ ಸೇತುವೆ ಮುಳುಗಡೆಗೊಂಡಿದೆ. ಕುಮಟಾ ತಾಲೂಕಿನ ಯಾಣಕ್ಕೆ ತೆರಳುವ ರಸ್ತೆಯಲ್ಲಿ ಸೇತುವೆ ಕುಸಿದು ಬಿದಿದ್ದು, ಸಂಚಾರಕ್ಕೆ ತೊಂದರೆ ಆಯಿತು.

ಇನ್ನು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ, ನಾಪೋಕ್ಲು ಭಾಗದಲ್ಲಿ ಬುಧವಾರ ರಾತ್ರಿ ಭಾರಿ ಮಳೆಯಾಗಿದ್ದರಿಂದ ಭಾಗಮಂಡಲ 2ನೇ ಬಾರಿ ಜಲಾವೃತವಾಗಿತ್ತು. ಗುರುವಾರ ಬೆಳಗ್ಗೆ 11ರ ನಂತರ ಮಳೆ ತಗ್ಗಿದ್ದರಿಂದ ಪ್ರವಾಹ ತಗ್ಗಿದ್ದರಿಂದ ಜನ ಸಂಪರ್ಕ ಸಹಜ ಸ್ಥಿತಿಗೆ ಬಂದಿದೆ. ಭಾಗಮಂಡಲ- ತಲಕಾವೇರಿ ರಸ್ತೆ, ನಾಪೋಕ್ಲು- ಅಯ್ಯಂಗೇರಿ ರಸ್ತೆ ಜಲಾವೃತ್ತಗೊಂಡಿತ್ತು. ಪರಿಣಾಮ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಶೃಂಗೇರಿ ಮಠಕ್ಕೆ ಸೇರಿರುವ ಸಂಧ್ಯಾವಂದನೆ ಮಂಟಪಕ್ಕೆ ನೀರು ನುಗ್ಗಿದೆ.

ಮಳೆ ಪ್ರಮಾಣ:  ಆಗುಂಬೆಯಲ್ಲಿ 24 ಗಂಟೆಗಳಲ್ಲಿ 300 ಮಿ.ಮೀ., ಭಾಗಮಂಡಲ 160, ತೀರ್ಥಹಳ್ಳಿ 137, ಹೊಸನಗರ 102, ಭಟ್ಕಳ 103, ಸಿದ್ದಾಪುರ 106, ನಾಪೋಕ್ಲು 108.2, ಕಾರ್ಕಳ ತಾಲೂಕಿನಲ್ಲಿ 120.3, ಬಂಟ್ವಾಳದಲ್ಲಿ 137 ಮಿ.ಮೀ., ಬೆಳ್ತಂಗಡಿಯಲ್ಲಿ 175.3 ಮಿ.ಮೀ. ಪುತ್ತೂರಿನಲ್ಲಿ 116 ಮಿ.ಮೀ., ಸುಳ್ಯದಲ್ಲಿ 142.2 ಮಿ.ಮೀ. ಮಳೆ ದಾಖಲಾಗಿದೆ.

ನದಿಗಳಲ್ಲಿ ಪ್ರವಾಹ:  ತುಂಗಾ ನದಿಯಲ್ಲಿ 25 ಸಾವಿರ ಕ್ಯುಸೆಕ್‌ ಪ್ರವಾಹ ಹೆಚ್ಚಾಗಿದೆ. ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಪಕ್ಷಿಧಾಮದ ನಡುಗಡ್ಡೆ ಸಂಪೂರ್ಣ ಜಲಾವೃತವಾಗಿದೆ. ಲಿಂಗನಮಕ್ಕಿ ಒಳಹರಿವು ಸುಮಾರು 20 ಸಾವಿರ ಕ್ಯುಸೆಕ್‌ ಹೆಚ್ಚಾಗಿದೆ. ಆದರೆ ಭದ್ರಾ ಒಳಹರಿವು ಹೆಚ್ಚು ವ್ಯತ್ಯಾಸವಾಗಿಲ್ಲ. ಕೇರಳದಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ 20,760 ಕ್ಯುಸೆಕ್‌ ನೀರು ಹರಿಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ, ಗಂಗಾವಳಿ, ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ, ಗಂಗಾವಳಿ, ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಗುಂಡಬಾಳ ಹೊಳೆ, ಉಡುಪಿ ಜಿಲ್ಲೆಯ ಪ್ರಮುಖ ನದಿಗಳಾದ ವಾರಾಹಿ, ಸೌಪರ್ಣಿಕಾ, ಚಕ್ರ, ಕುಬ್ಜೆ, ಮಡಿಸಾಲು, ಸೀತಾ, ಉದ್ಯಾವರ ಹೊಳೆ, ಪಾಂಗಾಳ ಹೊಳೆ, ಸುವರ್ಣ, ಮೂಡಿಗೆರೆ ತಾಲೂಕಿನಲ್ಲಿ ಹೇಮಾವತಿ ನದಿ ತುಂಬಿ ಹರಿಯುತ್ತಿವೆ.

ಎಚ್ಚರಿಕೆ: ಅರಬ್ಬಿ ಸಮುದ್ರದಲ್ಲಿ 3.5 ರಿಂದ 3.8 ಮೀ. ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. 35 ರಿಂದ 45 ಕಿ.ಮೀ. (ಪ್ರತಿಗಂಟೆಗೆ) ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಧಾರಾಕಾರ ಮಳೆ ಆಗಬಹುದು. ಆದ್ದರಿಂದ ಮೀನುಗಾರು ಸಮುದ್ರಕ್ಕೆ ಇಳಿಯದಂತೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

(ಸಾಂದರ್ಬಿಕ ಚಿತ್ರ]

loader