ಬೆಂಗಳೂರಲ್ಲಿ ಮತ್ತೊಮ್ಮೆ ವರುಣ ಅಬ್ಬರಿಸಿದ್ದಾನೆ. ನಿನ್ನೆ ರಾತ್ರಿ ಸುರಿದ ಮಳೆ ಅವಾಂತರ ಸೃಷ್ಟಿಸಿದ್ದು, ಮಳೆಯ ಆರ್ಭಟಕ್ಕೆ ಬೆಚ್ಚಿ ಬೀದ್ದ ಮೇಯರ್ ಸ್ವತಃ ತಡರಾತ್ರಿವರೆಗೂ ಮಳೆಹಾನಿ ಪ್ರದೇಶಗಳಿಗೆ ರೌಂಡ್ ಹಾಕಿದ್ರು.

ಬೆಂಗಳೂರು(ಅ.02): ಬೆಂಗಳೂರಲ್ಲಿ ಮತ್ತೊಮ್ಮೆ ವರುಣ ಅಬ್ಬರಿಸಿದ್ದಾನೆ. ನಿನ್ನೆ ರಾತ್ರಿ ಸುರಿದ ಮಳೆ ಅವಾಂತರ ಸೃಷ್ಟಿಸಿದ್ದು, ಮಳೆಯ ಆರ್ಭಟಕ್ಕೆ ಬೆಚ್ಚಿ ಬೀದ್ದ ಮೇಯರ್ ಸ್ವತಃ ತಡರಾತ್ರಿವರೆಗೂ ಮಳೆಹಾನಿ ಪ್ರದೇಶಗಳಿಗೆ ರೌಂಡ್ ಹಾಕಿದ್ರು.

ಮಳೆ ಬಂದರೆ ಬೆಂಗಳೂರು ಗಢಗಢ ಎಂದು ನಡುಗುತ್ತೆ. ನಿನ್ನೆ ಮತ್ತೊಮ್ಮೆ ವರುಣ ನಡುಗಿಸಿಬಿಟ್ಟಿದ್ದಾನೆ. ನಿನ್ನೆ ರಾತ್ರಿಯ ಮಳೆಗೆ ನಗರದ ಬಹುತೇಕ ಭಾಗದಲ್ಲಿ ಜನ ಪರದಾಡುವಂತಾಯಿತು. ಶಿವಾನಂದ ಸರ್ಕಲ್ ಬಳಿ ಅಂಡರ್ ಪಾಸ್​ ಥೇಟ್ ಕೆರೆಯಂಥಾಗಿತ್ತು. ಅದರಲ್ಲೇ ಬಿಎಂಟಿಸಿ ಬಸ್​ಗಳು ನುಗ್ಗಿ ಬರುತ್ತಿದ್ದವು. ಸಣ್ಣ ಪುಟ್ಟ ಗಾಡಿಗಳೆಲ್ಲ ಅಂಡರ್ ಪಾಸ್ ದಾಟುವ ಸಾಹಸ ಮಾಡಲಿಲ್ಲ. ಆದರೂ, ಒಂದು ಧೈರ್ಯ ಮಾಡಿ ನೀರಲ್ಲೇ ನುಗ್ಗಿ ಬರಲು ಯತ್ನಿಸಿದ ಕಾರೊಂದು ನೀರಲ್ಲೆ ನಿಂತುಬಿಟ್ಟಿತು. ಕೊನೆಗೆ ನಾಲ್ಕಾರು ಜನ ಸೇರಿ ಕಾರು ತಳ್ಳಿ ಪಕ್ಕಕ್ಕಿಟ್ಟರು.

ಮರ ಧರೆಗುರುಳಿ ಎರಡು ಕಾರುಗಳು ಜಖಂ, ಮೂವರಿಗೆ ಗಾಯ 

ಇನ್ನೂ ಗಾಂಧಿನಗರದ ನ್ಯಾಷನಲ್ ಮಾರ್ಕೆಟ್ ಪಕ್ಕದಲ್ಲೇ ಇದ್ದ ದೈತ್ಯಾಕಾರದ ಮರವೊಂದು ಧರೆಗುರುಳಿ ಎರಡು ಕಾರುಗಳು ಜಖಂ ಗೊಂಡಿವೆ.. ಈ ಮರದ ಕೆಳಗೆ ಸ್ಟಾಲ್ ಇಟ್ಟು ಕೊಂಡಿದ್ದ ಮಂಗಳೂರು ಮೂಲದ ಮೂವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಮಳೆಯ ಪ್ರಮಾಣ ಹೆಚ್ಚಾಗುತ್ತಲೇ ನೂತನ ಮೇಯರ್ ಸಂಪತ್ ರಾಜ್ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟರು. ಬನ್ನೆರುಘಟ್ಟ, ಹೊರಮಾವು, ವಸಂತಪುರ ವಾರ್ಡ್​ ಜಯನಗರ ಸೇರಿದಂತೆ ಹಲವೆಡೆ ಭೇಟಿ ಕೊಟ್ಟು ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದ್ರು.

ಬಳಿಕ ಕಂಟ್ರೋಲ್​ ರೂಮ್​'ಗೆ ಆಮಿಸಿದ ಮೇಯರ್ ತಡರಾತ್ರಿವರೆಗೂ ಸಾರ್ವಜನಿಕರ ದೂರುಗಳನ್ನು ಆಲಿಸಿದ್ರು. ಒಟ್ಟಿನಲ್ಲಿ , ನಿನ್ನೆ ರಾತ್ರಿ ಸುರಿದ ಮಳೆ ಮತ್ತೊಮ್ಮೆ ಬೆಂಗಳೂರಿಗರನ್ನ ಬೆಚ್ಚಿ ಬೀಳಿಸಿದ್ದು, ಜನ ಮಳೆಯ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.