ಪೋರ್ಟ್ ಬ್ಲೇರ್ (ಡಿ.07): ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ   ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹ್ಯಾವ್‍’ಲಾಕ್ ದ್ವೀಪದಲ್ಲಿ 800 ಮಂದಿ ಪ್ರವಾಸಿಗರು ಅಂತಂತ್ರರಾಗಿದ್ದಾರೆ.

ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿರುವ ಪರಿಣಾಮ, ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಪ್ರವಾಸಿಗರು ದ್ವೀಪದಲ್ಲಿಯೇ ಸಿಲುಕಿಕೊಂಡಿದ್ದಾರೆ.  

ದ್ವೀಪದಲ್ಲಿ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸಲು ಭಾರತೀಯ ನೌಕಾ ಪಡೆ 4 ಹಡಗುಗಳನ್ನು ಕಳುಹಿಸಿದ್ದು, ಪ್ರವಾಸಿಗರ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಅವರನ್ನು ಹ್ಯಾವ್’ಲಾಕ್ ದ್ವೀಪದಿಂದ ಪೋರ್ಟ್ ಬ್ಲೇರ್ ಗೆ ಸ್ಥಳಾಂತರಿಸಲಾಗುವುದು ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆ, ಅಂಡಮಾನ್ ಹಾಗೂ ನಿಕೋಬರ್ ದ್ವೀಪಗಳಲ್ಲಿ ಭಾರೀ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.