ಬೆಂಗಳೂರು [ಜು.11] : ಮಲೆನಾಡಿನ ಕೆಲ ಭಾಗ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮುಂದುವರಿದಿದೆ. 

ಇದೇವೇಳೆ ಕರಾವಳಿ ಭಾಗಗಳಲ್ಲಿ ನಾಪತ್ತೆಯಾಗಿದ್ದ ಮುಂಗಾರು ಇದೀಗ ಮತ್ತೆ ಚುರುಕಾಗಿದೆ. ನದಿತೊರೆಗಳು ತುಂಬಿ ಹರಿಯುತ್ತಿದ್ದು ಮಳೆ ಸಂಬಂಧಿ ಕಾರಣಗಳಿಗೆ ಹಲವಡೆ ಜನಜೀವನ ಅಸ್ತವ್ಯಗೊಂಡಿದೆ. ರಾಜ್ಯದಲ್ಲಿ ಸುಮಾರು 31ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಮರ ಬಿದ್ದ ಪರಿಣಾಮ ಶೌಚಾಲಯ ಗೋಡೆ ಕುಸಿತವುಂಟಾಗಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಿಂದ ವರದಿಯಾಗಿದೆ. 

ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ಮಾರ್ಕಂಡೇಯ, ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ಉಕ್ಕಿ ಹರಿಯುತ್ತಿದೆ. ಮಾರ್ಕಂಡೇಯ ನದಿ ತೀರದ 200 ಎಕರೆ ಪ್ರದೇಶದ ಹೊಲಗದ್ದೆಗಳು ಜಲಾವೃತಗೊಂಡಿದ್ದು ಕಬ್ಬು, ಭತ್ತ, ಮೆಣಸಿನಕಾಯಿ, ಕ್ಯಾಬೇಜ್‌, ಜೋಳದ ಮೇವು ನೀರುಪಾಲಾಗಿವೆ. 

ಖಾನಾಪುರ ತಾಲೂಕಿನ ನೀಲಾವಡೆ ಗ್ರಾಮದಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡ ಬ್ರಿಡ್ಜ್‌ ಕಂ ಬಾಂದಾರ ಮೇಲೂ ನೀರು ಹರಿಯುತ್ತಿದ್ದು, ಎರಡೂ ಬದಿಯಲ್ಲಿ ಭೂಮಿ ಕುಸಿದಿದೆ. ಮಲಪ್ರಭಾ ನದಿಯಲ್ಲಿ ಅಪಾಯ ಮಟ್ಟದಲ್ಲಿದ್ದು ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಎರಡೂ ಬದಿಗಳ ಗ್ರಾಮಗಳ ನಡುವಿನ ಸಂಪರ್ಕವೂ ಕಡಿತಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 11 ಮನೆ ಕುಸಿದಿವೆ.