ಚಿಕ್ಕಮಗಳೂರು : ಕೊಡಗು ಜಿಲ್ಲೆ ಆಯ್ತು, ಇದೀಗ ಪಶ್ಚಿಮಘಟ್ಟದ ವ್ಯಾಪ್ತಿಯಲ್ಲೇ ಇರುವ ಚಿಕ್ಕಮಗಳೂರಿನಲ್ಲೂ ಭೂಮಿ ಕಂಪನದ ಅನುಭವ ಆಗುತ್ತಿದೆ. ಕೊಡಗಿನಲ್ಲಿ ಈ ರೀತಿ ಭೂಕಂಪನದ ಅನುಭವದ ಬಳಿಕವೇ ಕಂಡುಕೇಳರಿಯದ ಭೂಕುಸಿತ ಸಂಭವಿಸಿ ಭಾರೀ ಅನಾಹುತ ಸೃಷ್ಟಿಯಾಗಿದೆ. 

ಹೀಗಾಗಿ ಚಿಕ್ಕಮಗಳೂರಲ್ಲಿ ಈ ಭೂಕಂಪನ ಸಾರ್ವಜನಿಕರಲ್ಲಿ ನಡುಕ ಸೃಷ್ಟಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ಸಮೀಪದಲ್ಲಿರುವ ಕೊಗ್ರೆ ಕಾಲೋನಿ, ನಾಯಕನಕಟ್ಟೆ, ಅನಕಲ್‌ಮಕ್ಕಿ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಕೆಲ ದಿನಗಳಿಂದ ಪದೇ ಪದೆ ಭೂಕಂಪನದ ಅನುಭವವಾಗುತ್ತಿದೆ. ಕೊಡಗಿನ ಅನಾಹುತ ನೋಡಿ ದಂಗಾಗಿದ್ದ ಇಲ್ಲಿನ ಜನ ಈಗ ಆತಂಕದಲ್ಲೇ ಜೀವನ ನಡೆಸುತ್ತಿದ್ದಾರೆ. ಪಶ್ಚಿಮಘಟ್ಟ ಪರ್ವತದ  ಶ್ರೇಣಿಯಲ್ಲಿರುವ ಮೇರುತಿ ಪರ್ವತದ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಗ್ರಾಮಗಳಿದ್ದು, ಇಲ್ಲಿ ಕೆಲ ಸಮಯದಿಂದ ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಭೂಮಿ ಕಂಪಿಸಿದ ಶಬ್ದ ಕೇಳಿಸುತ್ತದೆ. ಆದರೆ, ಇದರಿಂದ ಗ್ರಾಮದಲ್ಲಿನ ಮನೆಗಳಿಗೆ ಯಾವುದೇ ರೀತಿಯಲ್ಲೂ ಹಾನಿಯಾಗಿಲ್ಲ. 

ಸಹಜ ಪ್ರಕ್ರಿಯೆ: ಕೊಗ್ರೆ ಸೇರಿದಂತೆ ಸುತ್ತಮುತ್ತ  ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ನೀಡಿದ ಮೇರೆಗೆ ಕಳೆದ ವಾರ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ಕೊಪ್ಪದದಲ್ಲಿ ಬಿರುಕುಬಿಟ್ಟ ಭೂಮಿ, ಜನರಲ್ಲಿ ಆತಂಕ | ಕಳಸ ಸಮೀಪ ಭೂಕುಸಿತ, ಹಲವೆಡೆ ಕಂಪನ ವಿಜ್ಞಾನಿ ಡಾ. ರಮೇಶ್ ನೇತೃತ್ವದ ತಂಡ ಈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಇದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಭೂಮಿಯ ಒಳಪದರದಲ್ಲಿ ಕಂಡು ಬರುವ ಚಲನೆಯಿಂದಾಗುವ ಸಹಜ ಪ್ರಕ್ರಿಯೆ ಎಂದು ಅವರು ಹೇಳಿದ್ದರು. 

ತಜ್ಞರು ಬಂದು ಹೋದ ೫ ದಿನಗಳ ನಂತರ ಈಗ ಭಾನುವಾರ ಮತ್ತೆ ಭೂ ಕಂಪನವಾಗಿದೆ. ಮೂಡಿಗೆರೆ ತಾಲೂಕಿನ ಕಳಸ ಸಮೀಪದ ತಲಗೋಡು ಗ್ರಾಮದ ಕೆಲವಡೆ ಭೂ ಕುಸಿತ ಉಂಟಾಗಿದೆ. ಇದೇ ಗ್ರಾಮದ ಕಚ್ಚುಕುಡಿಗೆಯ ಕೆ.ಕೆ. ಸುಧಾಕರ ಎಂಬುವವರಿಗೆ ಸೇರಿದ ಕೃ ಷಿ ಭೂಮಿಯಲ್ಲಿ ಎರಡು ದಿನಗಳಿಂದ ಬಿರುಕು ಕಾಣಿಸಿಕೊಂಡಿದ್ದು, ನೀರಿನ ಬುಗ್ಗೆಗಳು ಮೇಲೇಳುತ್ತಿವೆ. ಇಲ್ಲೂ ಭೂಕಂಪನದ ಅನುಭವ ಆಗಿದೆ ಎಂದು ಹೇಳಲಾಗುತ್ತಿದ್ದು, ಇದರಿಂದಾಗಿ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಅಡಕೆ ಮರಗಳು ಒಂದರ ಮೇಲೋಂದರಂತೆ ಒರಗಿವೆ. ಚಿಕ್ಕಮಗಳೂರು ತಾಲೂಕಿನ ಮೆಣಸೆ ಗ್ರಾಮದಲ್ಲಿ ಇತ್ತೀಚೆಗೆ ಮನೆಯೊಂದು ಬಿರುಕು ಬಿಟ್ಟಿತ್ತು. 

ಜಿಲ್ಲೆಯ ಮಲೆನಾಡಿನಲ್ಲಿ ಭೂಕಂಪನ ಹಾಗೂ ಭೂಮಿಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿ ರುವುದು ಆತಂಕಕ್ಕೆ ಕಾರಣವಾಗಿದೆ. ಸತತವಾಗಿ ನಡೆಯುತ್ತಿರುವ ಈ ಘಟನೆಯಿಂದಾಗಿ ಜನ ಭಯಭೀತರಾಗಿದ್ದಾರೆ. ಕೊಡಗು, ದಕ್ಷಿಣ ಕನ್ನಡದ ಸುಳ್ಯ ಗಡಿಭಾಗದಲ್ಲೂ ಇದೇ ರೀತಿಯ ಕಂಪನ ಕಾಣಿಸಿಕೊಂಡಿತ್ತು, ಆ ಬಳಿಕ ಅಲ್ಲಿ ಭಾರೀ ಗುಡ್ಡಕುಸಿತ ಉಂಟಾಗಿ, ಹಲವರು ಮನೆ, ಮಠ, ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲೂ ಈಗ ಕೇಳಿಬರುತ್ತಿರುವ ಕಂಪನದ ಸದ್ದು ಅದೇ ರೀತಿಯ ವಿನಾಶದ ಸೂಚನೆಯೇ ಎನ್ನುವ ಭೀತಿ ಮನೆ ಮಾಡಿದೆ.