Asianet Suvarna News Asianet Suvarna News

ಪಿಯುನಲ್ಲಿ ಡಿಸ್ಟಿಂಕ್ಷನ್‌ ಪಡೆದರೂ ಸೀಟು ಸಿಗೋದು ಕಷ್ಟ!

ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಸಾರ್ವಕಾಲಿತ ಫಲಿತಾಂಶ ದಾಖಲಾಗುತ್ತಿರುವಂತೆಯೇ ನಗರದ ಪ್ರಮುಖ ಹಾಗೂ ಪ್ರತಿಷ್ಠಿತ ಕಾಲೇಜುಗಳು ಕಟ್‌ ಆಫ್‌ ಮಾರ್ಕ್ಸ್‌ ಅನ್ನು ಹಠಾತ್‌ ಆಗಿ ಏರಿಕೆ ಮಾಡಿವೆ. ಇದರಿಂದ ಡಿಸ್ಟಿಂಕ್ಷನ್‌ ಪಡೆದವರಿಗೂ ಸೀಟು ಸಿಗುವ ಖಾತರಿಯಿಲ್ಲದಂತೆ ಆಗಿದೆ.

Heavy Demand For Degree Courses In Bangalore
Author
Bengaluru, First Published Apr 17, 2019, 7:45 AM IST

ಬೆಂಗಳೂರು :  ಪಿಯುಸಿ ಪರೀಕ್ಷೆಯಲ್ಲಿ ಮೊದಲ ದರ್ಜೆ (ಫಸ್ಟ್‌ ಕ್ಲಾಸ್‌) ಪಡೆದಿರುವರಷ್ಟೇ ಅಲ್ಲ, ಡಿಸ್ಟಿಂಕ್ಷನ್‌ ಪಡೆದಿದ್ದರೂ ನಗರದ ಪ್ರಮುಖ ಪದವಿ ಕಾಲೇಜುಗಳಲ್ಲಿ ಸೀಟು ಸಿಗುತ್ತದೆ ಎಂಬುದಕ್ಕೆ ಖಾತರಿಯಿಲ್ಲ!

ಹೌದು, ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಸಾರ್ವಕಾಲಿತ ಫಲಿತಾಂಶ ದಾಖಲಾಗುತ್ತಿರುವಂತೆಯೇ ನಗರದ ಪ್ರಮುಖ ಹಾಗೂ ಪ್ರತಿಷ್ಠಿತ ಕಾಲೇಜುಗಳು ಕಟ್‌ ಆಫ್‌ ಮಾರ್ಕ್ಸ್‌ (ಪ್ರವೇಶಾತಿಗೆ ಹೊಂದಿರಬೇಕಾದ ಕನಿಷ್ಠ ಅಂಕ) ಅನ್ನು ಹಠಾತ್‌ ಆಗಿ ಏರಿಕೆ ಮಾಡಿವೆ. ಇದರಿಂದಾಗಿ ಡಿಸ್ಟಿಂಕ್ಷನ್‌ (ಅಂದರೆ ಶೇ.85ಕ್ಕೂ ಹೆಚ್ಚು ಅಂಕ) ಪಡೆದವರಿಗೂ ಸೀಟು ಸಿಗುವ ಖಾತರಿಯಿಲ್ಲದಂತೆ ಆಗಿದೆ.

ಪಿಯುಸಿ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಮೊದಲ ದರ್ಜೆ ಪಡೆದ ವಿದ್ಯಾರ್ಥಿಗಳು ನಗರದ ಪ್ರಮುಖ ಕಾಲೇಜುಗಳಿಗೆ ಪ್ರವೇಶಾತಿ ಅರ್ಜಿ ಪಡೆಯಲು ಮುಗಿಬಿದಿದ್ದಾರೆ. ಆದರೆ, ಕಟ್‌ಆಫ್‌ ಮಾರ್ಕ್ಸ್‌ ನೋಡಿ ಈ ವಿದ್ಯಾರ್ಥಿ ಗಾಬರಿಯಾಗಿದ್ದಾರೆ. ಅದರಲ್ಲೂ ವಾಣಿಜ್ಯ ಶಾಖೆಯಲ್ಲಿ ಮುಂದಿನ ವಿದ್ಯಾಭ್ಯಾಸ ನಡೆಸಬಯಸಿದ್ದ ವಿದ್ಯಾರ್ಥಿಗಳಿಗಂತೂ ದೊಡ್ಡ ಶಾಕ್‌ ಕಾದಿದೆ.

ಏಕೆಂದರೆ, ಕಳೆದ ಎರಡು ವರ್ಷಗಳಿಂದ ಬಿಎಸ್ಸಿಗಿಂತ ಬಿಕಾಂ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಹೆಚ್ಚು ಪ್ರಯತ್ನ ನಡೆಸುತ್ತಿರುವ ಪರಿಣಾಮ ವಾಣಿಜ್ಯ ಶಾಖೆಗೆ ತೀವ್ರ ಬೇಡಿಕೆ ಬಂದಿದೆ. ಇದರಿಂದಾಗಿ ಬಿಎಸ್ಸಿಗಿಂತ, ಬಿಕಾಂ ಪ್ರವೇಶಕ್ಕೆ ಇರುವ ಕಟ್‌ ಆಫ್‌ ಮಾರ್ಕ್ಸ್‌ ಹೆಚ್ಚಿದೆ. ಉದಾಹರಣೆಗೆ ಕ್ರೈಸ್ಟ್‌ ಕಾಲೇಜಿನಲ್ಲಿ ಬಿಎಸ್ಸಿಗೆ 85ಕ್ಕೂ ಹೆಚ್ಚು ಅಂತ ಇದ್ದರೆ, ಬಿಕಾಂಗೆ 90ಕ್ಕೂ ಹೆಚ್ಚಿನ ಅಂಕವನ್ನು ಕಟ್‌ ಆಫ್‌ ಎಂದು ನಿಗದಿಪಡಿಸಲಾಗಿದೆ!

2018-19ನೇ ಸಾಲಿನಲ್ಲಿ ಪದವಿ ಕಾಲೇಜುಗಳ ಕಟ್‌ ಆಫ್‌ ಅಂಕಗಳನ್ನು ಶೇ.82ರಿಂದ 85ಕ್ಕೆ ನಿಗದಿ ಮಾಡಿದ್ದ ಕಾಲೇಜುಗಳು, ಈ ಬಾರಿ ಮೊದಲ ಸುತ್ತಿನಲ್ಲಿ ಕನಿಷ್ಠ ಶೇ.90ಕ್ಕೆ ನಿಗದಿಗೊಳಿಸಿವೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಪದವಿ ಶಿಕ್ಷಣಕ್ಕೆ ಕನಿಷ್ಠ ಶೇ.5ರಷ್ಟುಕಟ್‌ಆಫ್‌ ಹೆಚ್ಚಳ ಮಾಡಲಾಗಿದೆ. ನಗರದ ಪ್ರತಿಷ್ಠಿತ ಖಾಸಗಿ ಕಾಲೇಜುಗಳು ಸೇರಿದಂತೆ ರಾಜ್ಯಾದ್ಯಂತ ಇರುವ ಕಾಲೇಜುಗಳು ಕಟ್‌ಆಫ್‌ ಅಂಕಗಳನ್ನು ಹೆಚ್ಚಳ ಮಾಡುತ್ತಿವೆ ಎಂದು ಖಾಸಗಿ ಕಾಲೇಜಿನ ಪ್ರಾಂಶುಪಾಲರೊಬ್ಬರು ತಿಳಿಸಿದರು.

ನಗರದ ಪ್ರಮುಖ ಕಾಲೇಜುಗಳಾದ ಕ್ರೈಸ್ಟ್‌, ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜು, ಪಿಇಎಸ್‌, ಮೌಂಟ್‌ ಕಾರ್ಮೆಲ್‌, ಶೇಷಾದ್ರಿಪುರಂ ಸೇರಿದಂತೆ ಹಲವು ಕಾಲೇಜುಗಳು ಬಿಕಾಂ ಕೋರ್ಸ್‌ಗಳಿಗೆ ಶೇ.90 ಅಂಕಗಳನ್ನು ನಿಗದಿ ಮಾಡಿವೆ. ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಸೀಟು ಪಡೆಯುವುದಕ್ಕಾಗಿ ಪ್ರತ್ಯೇಕ ಪ್ರವೇಶ ಪರೀಕ್ಷೆ ಬರೆಯುವುದಕ್ಕೆ ಕನಿಷ್ಠ ಅರ್ಹತೆಯನ್ನು ಶೇ.85 ಅಂಕಗಳಿಗೆ ನಿಗದಿ ಮಾಡಿದೆ.

ಕಟ್‌ಆಫ್‌ ಅಂಕಗಳನ್ನು ನಿಗದಿ ಮಾಡಿರುವ ಕುರಿತು ಮಾತನಾಡಿದ ಕ್ರೈಸ್ಟ್‌ ಕಾಲೇಜಿನ ಕುಲಪತಿ ಪ್ರೊ.ವಿ.ಎಂ.ಅಬ್ರಾಹಿಂ, ಕಳೆದ ವರ್ಷ ಶೇ.94ರಿಂದ 95ಕ್ಕೆ ಮೊದಲ ಆದ್ಯತೆ ನೀಡಲಾಗಿತ್ತು. ಈ ವರ್ಷ ಇನ್ನೂ ನಿಗದಿ ಮಾಡಿಲ್ಲ. ಹೆಚ್ಚಿನ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದು ತಿಳಿಸಿದರು.

ಬಿಕಾಂಗೆ ಭಾರೀ ಡಿಮ್ಯಾಂಡ್‌!

ಕಲಾ ಮತ್ತು ವಿಜ್ಞಾನ ಕೋರ್ಸ್‌ಗಳಿಗೆ ಹೋಲಿಸಿಕೊಂಡರೆ, ವಾಣಿಜ್ಯ ವಿಭಾಗದ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. 2-3 ವರ್ಷಗಳ ವರೆಗೆ ಬಿಎಸ್ಸಿ ಕೋರ್ಸ್‌ಗೆ ಹೆಚ್ಚಿನ ಬೇಡಿಕೆ ಇತ್ತು. ಪಿಯುಸಿಯಲ್ಲಿ ವಿಜ್ಞಾನ ಓದಿದ ಬಹುತೇಕ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಆಸಕ್ತಿ ವಹಿಸುತ್ತಿದ್ದಾರೆ. ಸಿಇಟಿ ಮತ್ತು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಯತ್ತ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ, ಬಿಎಸ್ಸಿ ಕೋರ್ಸ್‌ಗಿಂತ ಬಿಕಾಂ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿದು ಬಂದಿದೆ.

ವಾಣಿಜ್ಯ ಕೋರ್ಸ್‌ ಓದಿದವರಿಗೆ ಪದವಿ ಮುಗಿಯುತ್ತಿದ್ದಂತೆ ಉದ್ಯೋಗ ಅವಕಾಶ ಕೂಡ ದೊಡ್ಡ ಮಟ್ಟದಲ್ಲಿ ದೊರೆಯುತ್ತಿವೆ. ಸಹಜವಾಗಿಯೇ ವಿದ್ಯಾರ್ಥಿಗಳು ಕೂಡ ಬಿಕಾಂ ನತ್ತ ಮುಖ ಮಾಡುತ್ತಿದ್ದಾರೆ. ಮತ್ತೆ ಕೆಲವು ಕಾಲೇಜುಗಳು ಬಿಕಾಂ ಜತೆಗೆ ಬಿಬಿಎ, ಬಿಬಿಎಂ ಕೋರ್ಸ್‌ಗಳಿಗೂ ಬೇಡಿಕೆ ಬರುತ್ತಿದೆ ಎಂದು ತಿಳಿಸಿವೆ.

ಈ ಕುರಿತು ಮಾತನಾಡಿದ ಜಯಂತ್‌ ಎಂಬ ವಿದ್ಯಾರ್ಥಿಯು, ನನಗೆ ಶೇ.79 ಅಂಕ ಬಂದಿದೆ. ಬಿಕಾಂ ಪ್ರವೇಶಕ್ಕೆ ಅರ್ಜಿ ಪಡೆಯುವುದಕ್ಕಾಗಿ ಪ್ರತಿಷ್ಠಿತ ಕಾಲೇಜೊಂದಕ್ಕೆ ಹೋಗಿದ್ದೆ. ಮೊದಲ ಸುತ್ತಿನಲ್ಲಿ ಕನಿಷ್ಠ ಶೇ.90 ಅಂಕಗಳಿಗೆ ಕಟ್‌ಆಫ್‌ ಮಾಡಲಾಗಿದೆ. ಒಂದು ವಾರದ ನಂತರ ಎರಡನೇ ಸುತ್ತಿನ ಪ್ರಕ್ರಿಯೆ ಆರಂಭವಾಗಲಿದೆ ಕಾಯ್ದೆ ನೋಡಿ ಎಂದು ತಿಳಿಸಿದ್ದಾರೆ ಎಂದು ಅಭಿಪ್ರಾಯ ಹಂಚಿಕೊಂಡರು.

ವರದಿ : ಎನ್‌.ಎಲ್‌.ಶಿವಮಾದು

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

Follow Us:
Download App:
  • android
  • ios