ಸಿಯುದಾದ್‌ ವಿಕ್ಟೋರಿಯಾ[ಜೂ.27]: ಮೆಕ್ಸಿಕೋದಿಂದ ರಿಯೋ ಗ್ರಾಂಡೆ ನದಿ ಮೂಲಕ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಸಾಲ್ವೆಡರ್‌ ದೇಶದ ವ್ಯಕ್ತಿಯೊಬ್ಬ ತನ್ನ 2 ವರ್ಷದ ಪುತ್ರಿ ಜೊತೆ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. ಇಬ್ಬರ ಶವಗಳು ಬುಧವಾರ ನದಿ ತೀರದಲ್ಲಿ ಪತ್ತೆಯಾಗಿದೆ.

ಮಗಳನ್ನು ಬೆನ್ನಿಗೆ ಕಟ್ಟಿಕೊಂಡು ನದಿ ದಾಟುವಾಗಲೇ ದುರ್ಘಟನೆ ನಡೆದು, ಅದೇ ಸ್ಥಿತಿಯಲ್ಲಿ ತಂದೆ ಮತ್ತು ಮಗಳು ಶವವಾಗಿ ಪತ್ತೆಯಾಗಿದ್ದು, ಈ ಫೋಟೋ ಜಾಗತಿಕ ಮಟ್ಟದಲ್ಲಿ ವೈರಲ್‌ ಆಗಿದೆ. ಸಾಲ್ವೆಡರ್‌ ಪ್ರಜೆಯಾದ ಆಸ್ಕರ್‌ ಮಾರ್ಟಿನೆಜ್‌ ರಾಮಿರೆಜ್‌(25) ಅವರು ತಮ್ಮ 21 ವರ್ಷದ ಪತ್ನಿ ಹಾಗೂ 2 ವರ್ಷದ ಹೆಣ್ಣು ಮಗುವಿನೊಂದಿಗೆ ಭಾನುವಾರವೇ ಮೆಕ್ಸಿಕೋದ ರಿಯೋ ಗ್ರಾಂಡೆ ನದಿಯನ್ನು ಈಜಿಕೊಂಡು ಅಮೆರಿಕ ಪ್ರವೇಶಿಸಲು ಮುಂದಾಗಿದ್ದ.

ಇದಕ್ಕಾಗಿ ಮಗಳನ್ನು ಟೀಶರ್ಟ್‌ ಒಳಗೆ ಹಾಕಿ ಬೆನ್ನ ಹಿಂದೆ ಕಟ್ಟಿಕೊಂಡು ಸುರಕ್ಷಿತವಾಗಿ ನದಿ ದಾಟಲು ನಿರ್ಧರಿಸಿದ್ದ. ಆದರೆ, ನದಿಯ ಮಧ್ಯಭಾಗದಲ್ಲಿ ಪ್ರವಾಹಕ್ಕೆ ಸಿಲುಕಿ ಪತಿ-ಪತ್ನಿಯರು ಪ್ರತ್ಯೇಕಗೊಂಡಿದ್ದು, ಪತ್ನಿ ಈಜಿಕೊಂಡು ದಡ ಸೇರಿದ್ದಾಳೆ. ಆದರೆ, ಪತಿ ಮತ್ತು ಮಗಳ ಮೃತದೇಹಗಳು ಸೋಮವಾರ ಟಾಮಲಿಪಸ್‌ ರಾಜ್ಯದಲ್ಲಿರುವ ಮಟಮೊರೊಸ್‌ ಎಂಬಲ್ಲಿ ಪತ್ತೆಯಾಗಿವೆ.

ಎರಡು ವರ್ಷಗಳ ಹಿಂದೆ ಸಿರಿಯಾ ದೇಶ 5 ವರ್ಷ ಪುಟ್ಟಬಾಲಕಿಯೊಬ್ಬಳು ಕೂಡಾ ಹೀಗೆ ಸಮುದ್ರ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಅದು ಕೂಡಾ ಭಾರೀ ಸುದ್ದಿಯಾಗಿತ್ತು.