ಬೆಂಗಳೂರು (ಜೂ. 05):  ಪೊಲೀಸ್‌ ಇಲಾಖೆಗೆ ನೀಡಿರುವಂತೆ ಸಾರಿಗೆ ಇಲಾಖೆ ನೌಕರರಿಗೂ ಆರೋಗ್ಯ ಭಾಗ್ಯ ಯೋಜನೆಯನ್ನು ವಿಸ್ತರಿಸುವುದಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಭರವಸೆ ನೀಡಿದ್ದಾರೆ.

ಬಿಎಂಟಿಸಿ ಪರಿಶಿಷ್ಟಜಾತಿ ಹಾಗೂ ಪಂಗಡದ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ್‌ ಅವರ 128ನೇ ಜಯಂತ್ಯುತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇದುವರೆಗೂ ಪೊಲೀಸ್‌ ಇಲಾಖೆ ಸಿಬ್ಬಂದಿಗೆ ಮಾತ್ರ ಆರೋಗ್ಯ ಭಾಗ್ಯ ಯೋಜನೆ ಇತ್ತು. ಅದನ್ನು ಸಾರಿಗೆ ನೌಕರರಿಗೂ ಕೊಡಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬೇಡಿಕೆ ಕೊಟ್ಟಿದ್ದೇವೆ. ಸಕಾರಾತ್ಮಕವಾಗಿ ಅವರು ಸ್ಪಂದಿಸಲಿದ್ದಾರೆ.

ಜತೆಗೆ ಸಿಎಸ್‌ಆರ್‌ ಫಂಡ್‌ನಲ್ಲಿ 50 ಕೋಟಿ ರು.ಗಳನ್ನು ತಲಾ 25 ಕೋಟಿ ರು.ಗಳಂತೆ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗೆ ಸರ್ಕಾರ ಕೊಡುತ್ತಿದ್ದು, ಆ ಹಣವನ್ನು ಠೇವಣಿಯಾಗಿ ಇಟ್ಟುಕೊಳ್ಳಬೇಕು. ಬಡ್ಡಿ ಹಣದಲ್ಲಿ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವ ‘ಸಿ’ ಮತ್ತು ‘ಡಿ’ ಗ್ರೂಪ್‌ ನೌಕರರು ಮತ್ತು ಕುಟುಂಬದವರಿಗೆ ಹೃದಯ, ಕ್ಯಾನ್ಸರ್‌ ಕಾಯಿಲೆಗೆ ಉಚಿತವಾಗಿ ಚಿಕಿತ್ಸೆ ನೀಡಬೇಕಂಬ ಉದ್ದೇಶವಿದೆ. ಈ ಠೇವಣಿಯನ್ನು ಈ ಒಟ್ಟು 100 ಕೋಟಿ ರು.ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದರು.