ನವದೆಹಲಿ[ಮೇ.21]: ಪ್ರಧಾನಮಂತ್ರಿ ನ್ಯಾಷನಲ್‌ ಡಯಾಲಿಸಿಸ್‌ ಯೋಜನೆಯ ಅಡಿಯಲ್ಲಿ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಅವರ ಮನೆಯಲ್ಲೇ ಪೆರಿಟೋನಿಯಲ್‌ ಡಯಾಲಿಸಿಸ್‌ (ಹೊಟ್ಟೆಯ ಭಾಗದ ಅಂಗಾಂಗಳ ರಕ್ತ ಶುದ್ಧೀಕರಣ) ಸೌಲಭ್ಯ ಒದಗಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮುಂದಾಗಿದೆ.

2016ರಲ್ಲಿ ಈ ಯೋಜನೆ ಜಾರಿಯಾದಾಗ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ದಯಾಲಿಸಿಸ್‌ ನೀಡುವ ಯೋಜನೆ ಪರಿಚಯಿಸಲಾಗಿತ್ತು. ಈ ಸೌಲಭ್ಯವನ್ನು ಪಡೆಯಲು ರೋಗಿಗಳು ಪ್ರತಿಬಾರಿಯೂ ಜಿಲ್ಲಾ ಆಸ್ಪತ್ರೆಗಳಿಗೆ ತೆರಳಬೇಕಿತ್ತು. ಇದರಿಂದ ರೋಗಿಗಳಿಗೆ ಹೆಚ್ಚಿನ ಹೊರೆ ಆಗುತ್ತಿತ್ತು. ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಕರಡು ಪ್ರಸ್ತಾವನೆಯ ಪ್ರಕಾರ ರೋಗಿಗಳ ಮನೆಯಲ್ಲೇ ಪೆರಿಟೋನಿಯಲ್‌ ಡಯಾಲಿಸಿಸ್‌ ಸೌಲಭ್ಯ ನೀಡಲು ಉದ್ದೇಶಿಸಲಾಗಿದೆ. ಸಾಮಾನ್ಯವಾಗಿ ಬಳಕೆಯಲ್ಲಿರುವ ಹಿಮೋಡಯಾಲಿಸ್‌ಗೆ ಹೋಲಿಸಿದರೆ ಪೆರಿಟೋನಿಯಲ್‌ ಡಯಾಲಿಸಿಸ್‌ ಭಿನ್ನರೀತಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ರಕ್ತ ಶುದ್ಧೀಕರಣ ನಡೆಸುತ್ತದೆ.

ಮನೆಯಲ್ಲೇ ಚಿಕಿತ್ಸೆ ಹೇಗೆ?

ಈ ಯೋಜನೆಯ ಅಡಿಯಲ್ಲಿ ಚಿಕಿತ್ಸಕರು ರೋಗಿಗಳ ಮನೆಗೆ ಅಥವಾ ಹತ್ತಿರದ ಸಮುದಾಯ ಕೇಂದ್ರಗಳಿಗೆ ವೈದ್ಯಕೀಯ ಉಪಕರಣಗಳೊಂದಿಗೆ ಭೇಟಿ ನೀಡಲಿದ್ದಾರೆ. ಒಂದು ವೇಳೆ ರೋಗಿಗಳಿಗೆ ವಾರದಲ್ಲಿ ಎರಡರಿಂದ ಮೂರು ಬಾರಿ ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗದೇ ಇದ್ದರೆ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಪ್ರಯಾಣಕ್ಕೆ ತಗುಲುತ್ತಿದ್ದ ವೆಚ್ಚ ಉಳಿತಾಯವಾಗಲಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.