Asianet Suvarna News Asianet Suvarna News

‘ಮೊದಲು ಚಿಕಿತ್ಸೆ ನಂತರ ಹಣ’: ನೀತಿವಾಕ್ಯ ಪಾಲಿಸದಿದ್ದರೆ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ

ಖಾಸಗಿ ಆಸ್ಪತ್ರೆಗಳಿಗೆ ನಿಯಂತ್ರಣದ ಅಗತ್ಯವಿದೆ. ಈ ತಿದ್ದುಪಡಿ ಮೂಲಕ ಸರ್ಕಾರ ಜೀವಂತವಾಗಿದೆ ಎನ್ನುವುದನ್ನು ರುಜುವಾತು ಮಾಡುತ್ತೇನೆ ಎಂದು ಸಚಿವರು ಒತ್ತಿ ಹೇಳಿದರು.

Health Minister Strong Msg to Privite Hospitals

ಮಂಗಳೂರು(ಡಿ.12): ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಶೀಘ್ರದಲ್ಲೇ ಹೊಸ ಶಾಸನ ಮಾಡುವುದಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ.

ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದಲ್ಲಿ ಈಗಾಗಲೇ ಸಮಿತಿ ರಚನೆ ಮಾಡಲಾಗಿದೆ. ಶೀಘ್ರದಲ್ಲೇ ಅವರು ವರದಿ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ವೈದ್ಯಕೀಯ ಸಂಸ್ಥೆಗಳ ಅಧಿನಿಯಮಕ್ಕೆ ತಿದ್ದುಪಡಿ ತರಲಾಗುವುದು. ಅದು ಯಾವ ರೀತಿಯ ತಿದ್ದುಪಡಿ ಎನ್ನುವುದನ್ನು ಈಗಲೇ ಹೇಳುವುದಿಲ್ಲ ಎಂದು ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಖಾಸಗಿ ಆಸ್ಪತ್ರೆಗಳಿಗೆ ನಿಯಂತ್ರಣದ ಅಗತ್ಯವಿದೆ. ಈ ತಿದ್ದುಪಡಿ ಮೂಲಕ ಸರ್ಕಾರ ಜೀವಂತವಾಗಿದೆ ಎನ್ನುವುದನ್ನು ರುಜುವಾತು ಮಾಡುತ್ತೇನೆ ಎಂದು ಸಚಿವರು ಒತ್ತಿ ಹೇಳಿದರು.

ನೀತಿವಾಕ್ಯ ಬಾಯಿಪಾಠ ಮಾಡಲಿ: ಖಾಸಗಿ ಆಸ್ಪತ್ರೆಗಳಿಗೆ ಶೀಘ್ರದಲ್ಲೇ ‘ಚಿಕಿತ್ಸೆ ಮೊದಲು ಪಾವತಿ ನಂತರ’ ಎನ್ನುವ ನೀತಿವಾಕ್ಯ ನೀಡಲಿದ್ದೇವೆ. ಅವರು ಅದನ್ನು ಬಾಯಿಪಾಠ ಮಾಡಿಕೊಳ್ಳಬೇಕು. ಈ ನಿಯಮ ಉಲ್ಲಂಘಿಸಿದ್ದೇ ಆದರೆ ಸರ್ಕಾರ ನಿದ್ದೆ ಮಾಡುತ್ತ ಕೂರುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಮೇಶ್ ಕುಮಾರ್ ಎಚ್ಚರಿಸಿದರು.

ಯೂನಿವರ್ಸಲ್ ಹೆಲ್ತ್ ಕಾರ್ಡ್: ಸರ್ಕಾರಿ ಆಸ್ಪತ್ರೆಗಳಲ್ಲಿ ಎಪಿಎಲ್, ಬಿಪಿಎಲ್ ಕಾರ್ಡ್‌ಗಳ ಆಧಾರದಲ್ಲಿ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿ, ಯೂನಿವರ್ಸಲ್ ಹೆಲ್ತ್ ಕಾರ್ಡ್ ಮೂಲಕ ಎಲ್ಲರಿಗೂ ಉಚಿತ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ. ಕೆಲವೇ ತಿಂಗಳುಗಳಲ್ಲಿ ಇದು ಅನುಷ್ಠಾನವಾಗಲಿದೆ ಎಂದು ಹೇಳಿದರು.

ಸಿಬ್ಬಂದಿ ನೇಮಕ: ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ 8000 ಅರೆ ವೈದ್ಯಕೀಯ ಹಾಗೂ ಇತರ ಸಿಬ್ಬಂದಿ ನೇಮಕ ಮಾಡಲಾಗುವುದು. ಈಗಾಗಲೇ 4 ಸಾವಿರ ಮಂದಿಗೆ ಆದೇಶ ನೀಡಲಾಗಿದ್ದು, ಉಳಿದ 4 ಸಾವಿರ ಸಿಬ್ಬಂದಿ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಮೂರು ತಿಂಗಳೊಳಗೆ ತಜ್ಞ ವೈದ್ಯರನ್ನೂ ನೇಮಿಸಲಾಗುವುದು ಎಂದರು.

Follow Us:
Download App:
  • android
  • ios