ಎಲ್ಲವೂ ಅಂತಿಮ ಹಂತದಲ್ಲಿದ್ದು ವಿಶೇಷ ಅಧಿವೇಶ ಕರೆದು ಅನುಮೋದನೆ ಪಡೆಯಬೇಕಾ ಅಥವಾ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತರಬೇಕಾ ಎಂಬ ಬಗ್ಗೆ ನಿರ್ಧಾರಕ್ಕೆ ಬರಬೇಕಿದೆ. ಒಟ್ಟಿನಲ್ಲಿ ಈ ಕಾನೂನು ಜಾರಿಯಾಗುವುದು ನಿಶ್ಚಿತ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಬೆಂಗಳೂರು(ಆ. 13): ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ ಜಾರಿಗೆ ಬರುವುದು ನಿಶ್ಚಿತ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಭರವಸೆ ನೀಡಿದ್ದಾರೆ. ಸುವರ್ಣನ್ಯೂಸ್ ಈ ವಾರ ನಡೆಸಿದ "ಹಲೋ ಮಿನಿಸ್ಟರ್" ನೇರ ಪ್ರಸಾರ ಕಾರ್ಯಕ್ರಮದಲ್ಲಿ ಎರಡನೇ ಬಾರಿ ಪಾಲ್ಗೊಂಡಿದ್ದ ವೇಳೆ ರಮೇಶ್ ಕುಮಾರ್ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮಸೂದೆಗೆ ತಿದ್ದುಪಡಿಯನ್ನು ಮಾಡಲಾಗಿದ್ದು, ಸಾರ್ವಜನಿಕ ಅಹವಾಲುಗಳನ್ನು ಕೇಳಿದ ಬಳಿಕ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಬೆಂಗಳೂರಿನಿಂದ ದೂರವಾಣಿ ಕರೆ ಮಾಡಿದ ರವಿಯವರು, ವೈದ್ಯಕೀಯ ಮಸೂದೆ ಅತ್ಯಗತ್ಯವಾದರೂ ಯಾಕೆ ತಡೆಹಿಡಿಯಲಾಗಿದೆ ಎಂಬ ಪ್ರಶ್ನೆಗೆ ರಮೇಶ್ ಕುಮಾರ್ ಪ್ರತಿಕ್ರಿಯಿಸುತ್ತಿದ್ದರು. ಎಲ್ಲವೂ ಅಂತಿಮ ಹಂತದಲ್ಲಿದ್ದು ವಿಶೇಷ ಅಧಿವೇಶ ಕರೆದು ಅನುಮೋದನೆ ಪಡೆಯಬೇಕಾ ಅಥವಾ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತರಬೇಕಾ ಎಂಬ ಬಗ್ಗೆ ನಿರ್ಧಾರಕ್ಕೆ ಬರಬೇಕಿದೆ. ಒಟ್ಟಿನಲ್ಲಿ ಈ ಕಾನೂನು ಜಾರಿಯಾಗುವುದು ನಿಶ್ಚಿತ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ರಮೇಶ್ ಕುಮಾರ್ ಹೇಳಿದ್ದು..
"ಕೆಪಿಎಂಸಿ ಮಸೂದೆಗೆ ತಿದ್ದುಪಡಿ ಮಾಡಿ ವಿಧಾನಸಭೆಯಲ್ಲಿ ಮಂಡಿಸಿದೆವು. ಅನೇಕ ಸದಸ್ಯರು ಇನ್ನೂ ಚರ್ಚೆ ಆಗಬೇಕಿದೆ ಅಂದ್ರು... ನಿಯಮ ಪ್ರಕಾರ ವಿಧಾನಸಭೆ, ಪರಿಷತ್ ಎರಡೂ ಸದನಗಳ ಜಂಟಿ ಸಲಹಾ ಸಮಿತಿಗೆ ಇದನ್ನ ಒಪ್ಪಿಸಲಾಯಿತು. ಎಲ್ಲಾ ಚರ್ಚೆ ಮಾಡಿ ಒಂದೊಂದು ಕಲಂನ ತಿದ್ದುಪಡಿ ಮಾಡಿ ಮುಗಿಸಿದ್ದೇವೆ. ಸಾರ್ವಜನಿಕರ ಅಹವಾಲು ಕೇಳೋದಕ್ಕೆ ಆ. 18 ದಿನಾಂಕ ನಿಗದಿ ಮಾಡಿದ್ದೆವು. ಆದರೆ, ಸಲಹಾ ಸಮಿತಿ ಅಧ್ಯಕ್ಷ ರಾಜಣ್ಣನವರಿಗೆ ಬೇರೆ ಕೆಲಸವಿದ್ದದ್ದರಿಂದ ಅದನ್ನು ಆ. 24ಕ್ಕೆ ಮುಂದೂಡಿದ್ದೇವೆ. ಸಾರ್ವಜನಿಕರ ಅಹವಾಲು ಕೇಳಿ ಮುಗಿಸಿದ ಬಳಿಕ ಶಾಸನವನ್ನು ಜಾರಿಗೊಳಿಸೋದಕ್ಕೆ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ಮಾಡಲಾಗುವುದು. ವಿಶೇಷ ಅಧಿವೇಶನ ಕರೆಯಬೇಕಾ.? ಸುಗ್ರೀವಾಜ್ಞೆ ಹೊರಡಿಸಬೇಕಾ? ಅಥವಾ ಮುಂದಿನ ಡಿಸೆಂಬರ್'ನಲ್ಲಿ ನಡೆಯುವ ಅಧಿವೇಶನದಲ್ಲಿ ಅನುಮೋದನೆ ಪಡೆಯಬೇಕಾ ಎಂಬುದನ್ನು ನಿರ್ಧರಿಸುತ್ತೇವೆ. ಒಟ್ಟಿನಲ್ಲಿ ನೂರಕ್ಕೆ ನೂರು ಇದು ಜಾರಿಯಾಗುತ್ತದೆ... ಇದು ಜನಪರವಾಗಿ ಬಂದಿರುವ ಶಾಸನ... ಖಂಡಿತ ಜಾರಿಯಾಗುತ್ತದೆ ಯಾವುದೇ ಸಂಶಯ ಬೇಡ.." ಎಂದು ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ.
