ಬೆಂಗಳೂರು (ಮಾ. 07):  ರಾಜ್ಯದಲ್ಲಿ ಬಿಗಡಾಯಿಸಿರುವ ಮಂಗನ ಕಾಯಿಲೆ (ಕ್ಯಾಸನೂರ್‌ ಫಾರೆಸ್ಟ್‌ ಡಿಸೀಸ್‌) ನಿಯಂತ್ರಣಕ್ಕೆ ಸಾಗರದಲ್ಲಿ ಲ್ಯಾಬೊರೇಟರಿ ಹಾಗೂ 30 ಹಾಸಿಗೆಗಳ ಆಸ್ಪತ್ರೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಜತೆಗೆ ಪ್ರತಿ ವರ್ಷ ಮಂಗನ ಕಾಯಿಲೆ ನಿರೋಧಕ ಲಸಿಕೆ ಹಾಕುವ ಬದಲು 5 ವರ್ಷಕ್ಕೊಮ್ಮೆ ಹಾಕುವ ಪರಿಣಾಮಕಾರಿ ಲಸಿಕೆ ಸಂಶೋಧನೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್‌ ಹೇಳಿದ್ದಾರೆ.

ಮಂಗನ ಕಾಯಿಲೆ ನಿಯಂತ್ರಿಸಲು 2019ರಲ್ಲಿ 44,672 ಡಿಪಿಎಂ ತೈಲಗಳ ಬಾಟಲಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ. ಜತೆಗೆ ಕೆಎಫ್‌ಡಿ ಬಾಧಿತ ಪ್ರದೇಶದಲ್ಲಿ 1.22 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಆದರೆ ರಾಜ್ಯದಲ್ಲಿ ಹೆಬ್ಬಾಳದಲ್ಲಿ ಮಾತ್ರ ಲಸಿಕೆ ತಯಾರಿಸುವ ಘಟಕವಿದ್ದು, 3 ಲಕ್ಷ ಲಸಿಕೆ ತಯಾರಿಸಲು ಕೋರಿಕೆ ಸಲ್ಲಿಸಿದ್ದರೂ ಉದ್ದೇಶಿತ ಪ್ರಮಾಣದಲ್ಲಿ ತಯಾರಿಸಲು ಆಗಿರಲಿಲ್ಲ. ಹೀಗಾಗಿ ಸದ್ಯದಲ್ಲೇ ಶಿವಮೊಗ್ಗದಲ್ಲಿ ಹೊಸದಾಗಿ ಲಸಿಕಾ ತಯಾರಿಕೆ ಘಟಕ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಜತೆಗೆ ಕಾಯಿಲೆ ನಿಯಂತ್ರಣ ಹಾಗೂ ಕಾಯಿಲೆಗೆ ತುತ್ತಾದವರಿಗೆ ಅಗತ್ಯ ಚಿಕಿತ್ಸೆ ನೀಡಲು ಸಾಗರದಲ್ಲಿ ಒಂದು ಲ್ಯಾಬೊರೇಟರಿ ಮತ್ತು ಮೂವತ್ತು ಹಾಸಿಗೆಗಳ ಆಸ್ಪತ್ರೆ ಪ್ರಾರಂಭಿಸಲು ನಿರ್ಧರಿಸಲಾಗುವುದು. ಹಾಗೆಯೇ ರೋಗಾಣು ಪತ್ತೆ ಹಚ್ಚಲು ಇದುವರೆಗೂ ಜ್ವರ ಪೀಡಿತ ರಕ್ತದ ಮಾದರಿಗಳನ್ನು ಪುಣೆಗೆ ಅಥವಾ ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಇದರ ಬದಲು ಶಿವಮೊಗ್ಗ ಅಥವಾ ಸಾಗರದಲ್ಲೇ ಒಂದು ಡಯಾಗ್ನಾಸ್ಟಿಕ್‌ ಕೇಂದ್ರ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ಲಸಿಕೆ ಸಾಮರ್ಥ್ಯ ಹೆಚ್ಚಳ:

ಅರಳಗೋಡು, ಸಿರಿವಂತೆ, ಆವಿನಹಳ್ಳಿ ವ್ಯಾಪ್ತಿಯಲ್ಲಿ ಈ ರೋಗ ಕಂಡು ಬಂದಿದ್ದು, ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ನಂತರ ಗಂಭೀರ ಮಟ್ಟದಲ್ಲಿ ಅದರ ಸುಳಿವು ಕಂಡು ಬಂದಿದೆ. ಪ್ರಸ್ತುತ ಈ ಭಾಗದ ಜನರಿಗೆ ರೋಗ ನಿರೋಧಕ ಶಕ್ತಿಗಾಗಿ ಪ್ರತಿ ವರ್ಷ ಲಸಿಕೆ ಹಾಕುವ ಅನಿವಾರ್ಯತೆ ಇದೆ.

ಜತೆಗೆ ಲಸಿಕೆ ಹಾಕಿದ 60 ದಿನಗಳ ಬಳಿಕ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಹೀಗಾಗಿ ನವೆಂಬರ್‌ನಲ್ಲಿ ವ್ಯಾಪಕವಾಗುವ ಕಾಯಿಲೆಗೆ ಸೆಪ್ಟೆಂಬರ್‌ ಅಂತ್ಯದಲ್ಲೇ ಲಸಿಕೆ ಹಾಕುವ ಅನಿವಾರ್ಯತೆ ಇದೆ. ಇದರ ಬದಲು ಕನಿಷ್ಠ 3ರಿಂದ 5 ವರ್ಷ ರೋಗ ನಿರೋಧಕ ಸಾಮರ್ಥ್ಯವಿರುವಂತಹ ಪರಿಣಾಮಕಾರಿ ಲಸಿಕೆ ಕಂಡು ಹಿಡಿಯಲು ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು ಎಂದು ಹೇಳಿದರು.

ಈ ವೇಳೆ ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌ ಮಾತನಾಡಿ, ಕಾಯಿಲೆ ಗಂಭೀರವಾಗಿರುವುದರಿಂದ ಲಸಿಕೆ ಸಂಶೋಧನೆಗೆ ಸುದೀರ್ಘ ಅವಧಿ ನೀಡುವುದಿಲ್ಲ. ಬದಲಿಗೆ 9 ತಿಂಗಳೊಳಗಾಗಿ ಸಂಶೋಧನೆ ಮಾಡಬೇಕು. ಇದಕ್ಕೆ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ ಅಗತ್ಯ ಸಹಕಾರ ನೀಡಲಿದೆ ಎಂದರು. ಮಂಡ್ಯ ವೈದ್ಯಕೀಯ ಕಾಲೇಜು ನಿವೃತ್ತ ಡೀನ್‌ ಡಾ. ಶಿವಕುಮಾರ್‌ ಸೇರಿದಂತೆ ಹಲವರು ಹಾಜರಿದ್ದರು.

ಔಷಧ ಕೊರತೆ ಇಲ್ಲ

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಇದೆ ಎಂಬ ಬಗ್ಗೆ ಉತ್ತರಿಸಿದ ಸಚಿವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಇದೆ ಎನ್ನುವುದು ದೊಡ್ಡ ಸುಳ್ಳು. ಈ ಬಗ್ಗೆ ತನಿಖೆ ನಡೆಸಿ ವರದಿ ಪಡೆದಿದ್ದು, ಔಷಧಗಳ ಮಾರಾಟದ ಗುತ್ತಿಗೆದಾರರೊಬ್ಬರು ಈ ರೀತಿ ಪಿತೂರಿ ಮಾಡಿದ್ದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಹಣಕಾಸು ಇದೆ. ಔಷಧ ಖರೀದಿಗೆ ಅಗತ್ಯ ಅಧಿಕಾರ ನೀಡಲಾಗಿದೆ ಎಂದರು.