ಹೆಡ್ ಕಾನ್‌ಸ್ಟೇಬಲ್‌ವೊಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ವಿಚಾರವು ಬಹಿರಂಗವಾಗಿ ಇಲಾಖೆಯಲ್ಲಿ ಮಂಗಳವಾರ ಸಂಚಲನ ಸೃಷ್ಟಿಸಿ, ಬಳಿಕ ಆ ವಿವಾದಕ್ಕೆ ಅದೇ ಸಿಬ್ಬಂದಿ ಸ್ಪಷ್ಟೀಕರಣ ನೀಡುವ ಮೂಲಕ ಪ್ರಕರಣ ಸುಖಾಂತ್ಯವಾಯಿತು.
ಬೆಂಗಳೂರು : ಪೊಲೀಸ್ ಆಯುಕ್ತರಿಗೆ ಇನ್ಸ್‌ಪೆಕ್ಟರ್ ಕಿರುಕುಳ ಸಹಿಸಲಾರದೆ ಹೆಡ್ ಕಾನ್‌ಸ್ಟೇಬಲ್‌ವೊಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ವಿಚಾರವು ಬಹಿರಂಗವಾಗಿ ಇಲಾಖೆಯಲ್ಲಿ ಮಂಗಳವಾರ ಸಂಚಲನ ಸೃಷ್ಟಿಸಿ, ಬಳಿಕ ಆ ವಿವಾದಕ್ಕೆ ಅದೇ ಸಿಬ್ಬಂದಿ ಸ್ಪಷ್ಟೀಕರಣ ನೀಡುವ ಮೂಲಕ ಪ್ರಕರಣ ಸುಖಾಂತ್ಯವಾಯಿತು.
ಈ ರಾಜೀನಾಮೆ ಪತ್ರವೂ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಯಿತು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ತಕ್ಷಣವೇ ಸಂಬಂಧಿಸಿದ ಇನ್ಸ್‌ಪೆಕ್ಟರ್ ಹಾಗೂ ಹೆಡ್ ಕಾನ್‌ಸ್ಟೇಬಲ್ ಅವರಿಂದ ವಿವರಣೆ ಪಡೆದಿದ್ದಾರೆ. ಇದಾದ ಬಳಿಕ ಕಾನ್‌ಸ್ಟೇಬಲ್, ತಾನು ರಾಜೀನಾಮೆ ನೀಡಿಲ್ಲವೆಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ ಎನ್ನಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಠಾಣೆ ಹೆಡ್ ಕಾನ್‌ಸ್ಟೇಬಲ್ ಎಸ್.ರೇಣುಕಾಪ್ರಸಾದ್ ಎಂಬುವರೇ ಪದ ತ್ಯಾಗಕ್ಕೆ ಮುಂದಾದವರು ಎನ್ನಲಾಗಿದ್ದು, ಆ ಠಾಣೆ ಇನ್ಸ್‌ಪೆಕ್ಟರ್ ಮಲ್ಲೇಶ್ ವಿರುದ್ಧ ಕಿರುಕುಳ ನೀಡಿದ ಆರೋಪ ಕೇಳಿ ಬಂದಿತು. ಬೆಳಗ್ಗೆ ರೇಣುಕಾ ಪ್ರಸಾದ್ ಅವರ ಸಹಿ ಮಾಡಿದ್ದಾರೆ ಎನ್ನಲಾದ ರಾಜೀನಾಮೆ ಪತ್ರವು ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡಿ ಕೆಳಹಂತದ ಸಿಬ್ಬಂದಿ ವರ್ಗದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟು ಹಾಕಿತು. ಈ ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಳ್ಳುವ ಸೂಚನೆ ದೊರೆತ ಹಿನ್ನೆಲೆಯಲ್ಲಿ ಎಚ್ಚೆತ್ತ ಹಿರಿಯ ಅಧಿಕಾರಿಗಳು, ವಿವಾದಕ್ಕೆ ಸಿಲುಕಿದ್ದ ಇನ್ಸ್‌ಪೆಕ್ಟರ್ ಹಾಗೂ ಕಾನ್‌ಸ್ಟೇಬ್ ಅವರಿಗೆ ಬುದ್ಧಿ ಮಾತು ಹೇಳಿ ಮನಸ್ತಾಪವನ್ನು ಶಮನಗೊಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ರಾಜೀನಾಮೆ ಪತ್ರದಲ್ಲೇನಿತು?:
2005ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ನಾನು (ರೇಣುಕಾ ಪ್ರಸಾದ್), ಮುಂಬಡ್ತಿ ಪಡೆದು ಹೆಡ್‌ಕಾನ್‌ಸ್ಟೇಬಲ್ ಆಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರತಿಗಳನ್ನು ಆಂಧ್ರ ಪ್ರದೇಶದ ಮಂಗಳಗೌರಿ ಠಾಣೆಗೆ ತಲುಪಿಸುವಂತೆ ಸೆ.28ರಂದು ಇನ್ಸ್‌ಪೆಕ್ಟರ್ ಸೂಚಿಸಿದ್ದರು. ಈ ಮಧ್ಯೆ ನಾನು, ಇನ್ಸ್‌ಪೆಕ್ಟರ್ ಮಲ್ಲೇಶ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದೆ. ಆಗ ಆಂಧ್ರಪ್ರದೇಶದ ಪೊಲೀಸರು, ನಾವು ನಿಮ್ಮ ಇನ್ಸ್‌ಪೆಕ್ಟರ್ ಜತೆ ಮಾತನಾಡುತ್ತೇನೆ ಎಂದು ಹೇಳಿ ಮೊಬೈಲ್ ಪಡೆದರು.
ಅದೇ ಸಮಯಕ್ಕೆ ಎಸ್ಪಿ ಅವರ ಕರೆ ಬಂದ ಪರಿಣಾಮ ಅಲ್ಲಿನ ಠಾಣಾಧಿಕಾರಿ, ಮಲ್ಲೇಶ್ ಅವರಿಗೆ ಕೆಲ ಹೊತ್ತು ಬಿಟ್ಟು ಕರೆ ಮಾಡುವುದಾಗಿ ಹೇಳಿ ನನಗೆ ಮೊಬೈಲ್ ಮರಳಿಸಿದ್ದರು. ಇದಕ್ಕೆ ಕೋಪಗೊಂಡ ಮಲ್ಲೇಶ್ ಅವರು, ‘ನೀನ್ಯಾರೋ ಮಗನೇ ಅವರಿಂದ ಕರೆ ಮಾಡಿಸಲು ಮಗನೇ ನಾನು ಹೇಳಿದ್ದಷ್ಟೇ ಮಾಡಿಕೊಂಡು ಬಾ. ಅಧಿಕ ಪ್ರಸಂಗತನ ತೋರಿದರೆ ಬೂಟ್‌ನಲ್ಲಿ ಹೊಡೆಯುತ್ತೇನೆ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಈ ವರ್ತನೆಯು ನನಗೆ ನೋವುಂಟು ಮಾಡಿದ್ದು, ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ರೇಣುಕಾ ಪ್ರಸಾದ್ ಸಹಿ ಮಾಡಿದ ಪತ್ರವು ಬಹಿರಂಗವಾಗಿತ್ತು.
ಈ ರಾಜೀನಾಮೆ ಪತ್ರದ ಪ್ರತಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ಹೆಡ್ ಕಾನ್‌ಸ್ಟೇಬಲ್ ಕಳುಹಿಸಿದ್ದರು. ಆದರೆ ಈ ಪತ್ರವನ್ನು ಕಾನ್‌ಸ್ಟೇಬಲ್‌ನ ಸ್ನೇಹಿತರು, ಮೊಬೈಲ್‌ನಲ್ಲಿ ಫೋಟೋ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದರು ಎನ್ನಲಾಗಿದೆ.
