ಸಿದ್ದರಾಮಯ್ಯ ಬರೆದ ಚೀಟಿ ಓದೋ ರಾಹುಲ್‌!

HDK Slams CM Siddaramaiah
Highlights

ಬಿಜೆಪಿಯ ಬಿ ಟೀಮ್‌ ಜೆಡಿಎಸ್‌ ಮತ್ತು ಜೆಡಿಎಸ್‌ ಅಂದರೆ ಜಾತ್ಯತೀತ ಜನತಾದಳ (ಸಂಘ ಪರಿವಾರ) ಎಂಬ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆ ಬಗ್ಗೆ ಜೆಡಿಎಸ್‌ ನಾಯಕರು ವ್ಯಗ್ರವಾಗಿದ್ದಾರೆ.

ಮಾಗಡಿ : ಬಿಜೆಪಿಯ ಬಿ ಟೀಮ್‌ ಜೆಡಿಎಸ್‌ ಮತ್ತು ಜೆಡಿಎಸ್‌ ಅಂದರೆ ಜಾತ್ಯತೀತ ಜನತಾದಳ (ಸಂಘ ಪರಿವಾರ) ಎಂಬ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆ ಬಗ್ಗೆ ಜೆಡಿಎಸ್‌ ನಾಯಕರು ವ್ಯಗ್ರವಾಗಿದ್ದಾರೆ. ರಾಹುಲ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ರಾಮನಗರ ಜಿಲ್ಲೆ ಮಾಗಡಿಯಲ್ಲಿ ನಡೆದ ಕುಮಾರಪರ್ವ ಸಮಾವೇಶದಲ್ಲಿ ಜೆಡಿಎಸ್‌ ಮುಂದಾಳುಗಳಿಬ್ಬರೂ ರಾಹುಲ್‌, ಸಿದ್ದರಾಮಯ್ಯ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

‘ಯಾರೋ ಬರೆದುಕೊಟ್ಟಿದ್ದನ್ನು ರಾಹುಲ್‌ ಓದುತ್ತಾರೆ, ಚೀಟಿ ಬರೆದು ಕೊಟ್ಟಿರೋದು ಯಾರು ಎಂಬುದನ್ನು ಅವರು ತಿಳಿದುಕೊಳ್ಳಲಿ. ಸಿದ್ದರಾಮಯ್ಯ ತಮಗೆ ಬೇಕಾದಂತೆ ಬರೆದು ರಾಹುಲ್‌ ಕೈಲಿ ಓದಿಸುತ್ತಾರೆ. ನಮ್ಮ ಜಾತ್ಯತೀತತೆ ಬಗ್ಗೆ ಪ್ರಶ್ನಿಸುವ ಯೋಗ್ಯತೆ ಅವರಿಗಿಲ್ಲ’ ಎಂದು ಗುಡುಗಿರುವ ದೇವೇಗೌಡರು, ‘ಬಿಜೆಪಿಯ 18 ಶಾಸಕರ ಬೆಂಬಲ ಪಡೆದು ಆಡಳಿತ ನಡೆಸುತ್ತಿದ್ದ ರಾಮಕೃಷ್ಣ ಹೆಗಡೆ ಕಾಲದಲ್ಲಿ ಸಿದ್ದರಾಮಯ್ಯ ಅವರು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದರು. ಅವರಿಗೆ ಕ್ಯಾಬಿನೆಟ್‌ ದರ್ಜೆಯ ಸ್ಥಾನಮಾನವಿತ್ತು. ಅಂದು ಅಧಿಕಾರ ಅನುಭವಿಸುತ್ತಿದ್ದಾಗ ಸಿದ್ದರಾಮಯ್ಯ ಅವರ ಜಾತ್ಯತೀತತೆ ಎಲ್ಲಿಗೆ ಹೋಗಿತ್ತು? ಸಿದ್ದರಾಮಯ್ಯ ಅವರನ್ನು ಡಿಸಿಎಂ ಮಾಡಿದ್ದು ಜೆಡಿಎಸ್‌. ಈಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆಂದು ಸಿದ್ದರಾಮಯ್ಯ ದ್ವೇಷದಿಂದ ವರ್ತಿಸುತ್ತಿದ್ದಾರೆ’ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ನಾವು ಬಿಜೆಪಿ ಜೊತೆ ಕೈಜೋಡಿಸುತ್ತಿದ್ದೇವೆ ಅಂತ ಕಾಂಗ್ರೆಸ್‌ನವರು ಕತೆ ಕಟ್ಟುತ್ತಿದ್ದಾರೆ. ಅವರಿಗೆ ಒಂದು ವಿಷಯ ಗೊತ್ತಿರಲಿ, ನಾವು ಬಿಜೆಪಿ ಪಕ್ಕದಲ್ಲಿ ಕೂತು ಕೆಮ್ಮಿದರೆ ಕಾಂಗ್ರೆಸ್‌ ಸರ್ವನಾಶವಾಗಿಬಿಡುತ್ತೆ. ಆದರೆ, ನಮಗೆ ಬಿಜೆಪಿಯ ಸಹವಾಸವೂ ಬೇಡ, ಕಾಂಗ್ರೆಸ್‌ ಸಹವಾಸವೂ ಬೇಡ. ಕಾಂಗ್ರೆಸ್‌ನವರು ಮಾಡುತ್ತಿರುವ ಆರೋಪಕ್ಕೆ ಮತದಾರನೇ ಉತ್ತರ ನೀಡುತ್ತಾನೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವೇಗೌಡ ಗುಡುಗು: ಜೆಡಿಎಸ್‌ ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು, ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ರಾಹುಲ್‌ ಗಾಂಧಿ ಅವರಿಗೆ ವಿಧಾನಸಭಾ ಚುನಾವಣೆ ಫಲಿತಾಂಶದ ಮೂಲಕ ಜೆಡಿಎಸ್‌ ಶಕ್ತಿಯನ್ನು ತೋರಿಸಿ ಕೊಡುತ್ತೇವೆ. ಈ ಚುನಾವಣೆ ಜೆಡಿಎಸ್‌ ಕಾರ್ಯಕರ್ತರಿಗೆ ಪ್ರತಿಷ್ಠೆಯಾಗಿದ್ದು, ಜೆಡಿಎಸ್‌ ಎ ಟೀಮಾ, ಬಿ ಟೀಮಾ ಅಥವಾ ಸಿ ಟೀಮಾ ಎಂಬುದನ್ನು ತೋರಿಸುತ್ತೇನೆ ಎಂದರು.

ಜೆಡಿಎಸ್‌ ಎಲ್ಲಾ ಜಾತಿ ಧರ್ಮಗಳ ಜನರನ್ನು ಒಳಗೊಂಡಿರುವ ಪಕ್ಷ. ಹೀಗಿದ್ದರೂ ಜಾತ್ಯತೀತ ಪಕ್ಷವೊಂದನ್ನು ಸಂಘ ಪರಿವಾರಕ್ಕೆ ಹೋಲಿಕೆ ಮಾಡಿರುವ ರಾಹುಲ್‌ ಗಾಂಧಿಗೆ ರಾಜಕೀಯದ ಪೂರ್ಣ ಅರಿವಿಲ್ಲ. ರಾಹುಲ್‌ಗೆ ಚೀಟಿ ಬರೆದುಕೊಟ್ಟವರು ಯಾರು ಎಂಬುದನ್ನು ಮೊದಲು ತಿಳಿದುಕೊಳ್ಳಲಿ ಎಂದು ಹೇಳಿದರು.

ಈಗ ಕಾಂಗ್ರೆಸ್‌ ಸಿದ್ದರಾಮಯ್ಯನವರ ಪಾದದ ಅಡಿಯಲ್ಲಿದೆ. ಹೀಗಾಗಿ ಸಿದ್ದರಾಮಯ್ಯ ತಮ್ಮ ಮನಸ್ಸಿನ ಕೋಪವನ್ನು ರಾಹುಲ್‌ ಗಾಂಧಿ ಮೂಲಕ ವ್ಯಕ್ತಪಡಿಸಿದ್ದಾರೆ. ಸೋಲಿನ ಭೀತಿಯಿಂದಾಗಿ ಇಂತಹ ಮಾತುಗಳನ್ನು ಆಡಿಸಿದ್ದಾರೆ. ಇದಕ್ಕೆ ತಕ್ಕ ಬೆಲೆ ತೆತ್ತುವ ಕಾಲ ದೂರ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು.

ದೇಶದಲ್ಲಿ ಬೆರಳೆಣಿಕೆಷ್ಟುರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್‌ ಅಧಿಕಾರ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರು ದೇಶವನ್ನು ಕಾಂಗ್ರೆಸ್‌ ಮುಕ್ತಗೊಳಿಸಲು ಹೊರಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸೋನಿಯಾ ಗಾಂಧಿಯವರು ಜಾತ್ಯತೀತ ಶಕ್ತಿಗಳು ಒಗ್ಗೂಡಲು ಕರೆ ನೀಡಿದ್ದಾರೆ. ತೆಲಂಗಾಣ, ಸೀಮಾಂಧ್ರ, ತಮಿಳುನಾಡು, ಒರಿಸ್ಸಾ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷಗಳ ಜೊತೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಸೋನಿಯಾಗಾಂಧಿ ಅವರ ಮನೆಯ ಬಾಗಿಲಲ್ಲಿ ಕಾದು ನಿಂತಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಜೆಡಿಎಸ್‌ನ್ನು ನಿರ್ನಾಮ ಮಾಡುತ್ತೇನೆ ಎಂದು ರಾಹುಲ… ಗಾಂಧಿ ಅತಿರೇಕದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಗಾ ಪಂಜರದ ಗಿಳಿ: ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್‌ ಪರ ಪ್ರಚಾರ ಮಾಡುತ್ತಿರುವ ಎಐಸಿಸಿ ರಾಹುಲ್‌ ಗಾಂಧಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಂಜರದೊಳಗಿನ ಗಿಳಿಯಂತೆ ವರ್ತಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯನವರು ಜೆಡಿಎಸ್‌ ಬಗ್ಗೆ ಹೊಂದಿರುವ ಮನದಾಳದ ಮಾತುಗಳನ್ನು ರಾಹುಲ್‌ ಗಾಂಧಿ ಅವರ ಬಾಯಲ್ಲಿ ಆಡಿಸುತ್ತಿದ್ದಾರೆ. ರಾಹುಲ್‌, ಪಂಜರದೊಳಗಿನ ಗಿಳಿಯಂತೆ ಕಾಣುತ್ತಿದ್ದಾರೆ. ಜೆಡಿಎಸ್‌ ವರಿಷ್ಠ ದೇವೇಗೌಡರ ಭದ್ರಕೋಟೆಯಾಗಿರುವ ಪ್ರದೇಶದಲ್ಲಿಯೇ ರಾಹುಲ್‌ ಗಾಂಧಿ ಅವರು ಜೆಡಿಎಸ್‌ ಕೆಣಕುವ ಕೆಲಸ ಮಾಡಿದ್ದಾರೆ. ಅವರಿಗೆ ಚುನಾವಣೆ ಮೂಲಕವೇ ಉತ್ತರ ನೀಡುತ್ತೇವೆ. ಕಾಂಗ್ರೆಸ್‌ ಪಕ್ಷವೇ ಜೆಡಿಎಸ್‌ನ ನಿಜವಾದ ಬಿ ಟೀಮ್‌ ಎಂದು ಹೇಳಿದರು.

 

loader