ಶಿವಮೊಗ್ಗ : ಚುನಾವಣೆ ಸಂದರ್ಭದಲ್ಲಿ ಓರ್ವ ರಾಷ್ಟ್ರ ಭಕ್ತ ನರೇಂದ್ರ ಮೋದಿ ಕುರಿತಾಗಿ ಮಾಜಿ ಸಿ.ಎಂ. ಸಿದ್ದರಾಮಯ್ಯ, ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಎಚ್‌.ಡಿ. ರೇವಣ್ಣ ಮತ್ತಿತರರು ಹೀಯಾಳಿಸುತ್ತಿದ್ದ ವೇಳೆ ನಮ್ಮ ರಕ್ತ ಕುದಿಯುತ್ತಿತ್ತು. ಇದೀಗ ಮತದಾರರು ಸರಿಯಾದ ಶಾಸ್ತಿ ಮಾಡಿದ್ದಾರೆ. ಅವರಾಡಿದ ಮಾತುಗಳಿಗೆ ಈಗಲಾದರು ದೇವರಲ್ಲಿ ಕ್ಷಮೆ ಕೇಳಬೇಕು. ಮಾನ ಮರಾರ‍ಯದೆ ಇದ್ದರೆ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ, ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಕೆ.ಎಸ್‌. ಈಶ್ವರಪ್ಪ ಒತ್ತಾಯಿಸಿದರು.

ಫಲಿತಾಂಶ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸುವುದರ ಮೂಲಕ ಪ್ರಧಾನಿ ನರೇದ್ರ ಮೋದಿಯವರನ್ನು ಏಕವಚನದಲ್ಲಿ ಹಿಯಾಳಿಸುತ್ತಿದ್ದವರಿಗೆ ಸರಿಯಾದ ಶಾಸ್ತಿ ಮಾಡಿದ್ದೇವೆ. ಒಬ್ಬ ದೇಶ ಭಕ್ತನನ್ನು ದೇಶದ ಜನ ಎಷ್ಟುಪ್ರೀತಿಸುತ್ತಿದ್ದಾರೆ ಎನ್ನುವುದು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದನ್ನು ನೋಡಿದರೆ ಗೊತ್ತಾಗುತ್ತದೆ ಎಂದರು.

ಟ್ರಬಲ್‌ಗೆ ಸಿಕ್ಕ ಟ್ರಬಲ್‌ ಶೂಟರ್‌:

ಟ್ರಿಬಲ್‌ ಶೂಟರ್‌ ಎಂದು ಹೇಳಿಕೊಂಡು ಶಿವಮೊಗ್ಗಕ್ಕೆ ಬಂದಿದ್ದ ಡಿ.ಕೆ. ಶಿವಕುಮಾರ್‌ ಸ್ವತಃ ಈಗ ಟ್ರಬಲ್‌ಗೆ ಸಿಕ್ಕಿಕೊಂಡಿದ್ದಾರೆ. ಅವರು ಹೋದಲ್ಲೆಲ್ಲಾ ಗೆಲ್ಲುತ್ತಾರಂತೆ. ಇದೀಗ ಫಲಿತಾಂಶ ಏನಾಗಿದೆ? ಡಿ.ಕೆ. ಸುರೇಶ್‌ ಅದು ಹೇಗೆ ಗೆದ್ರೊ ಗೊತ್ತಾಗಿಲ್ಲ ಎಂದು ಲೇವಡಿ ಮಾಡಿದರು.

ದೇಶದ ಮತದಾರರು, ಉಗ್ರರನ್ನು ಸದೆ ಬಡಿದ ನರೇಂದ್ರ ಮೋದಿ ಜೊತೆಗಿದ್ದಾರೆ ಎನ್ನುವುದು ಫಲಿತಾಂಶ ಸಾಬೀತು ಮಾಡಿದೆ. ಮೋದಿ ವಿರುದ್ಧ ಕೀಳು ಮಟ್ಟದಲ್ಲಿ ಟೀಕಿಸಿ ಹೇಳಿಕೆ ನೀಡಿದ್ದಕ್ಕೆ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ವಿರುದ್ಧ ಆವೇಶದಿಂದ ಬಾ ಮಗನೇ ಚುನಾವಣೆಗೆ ನೋಡ್ಕೋತಿನಿ ಎಂದು ಹೇಳಿಕೆ ನೀಡಿದ್ದೆ. ಒಬ್ಬ ಮಾಜಿ ಸಿ.ಎಂ. ವಿರುದ್ಧ ಆ ರೀತಿ ಪದ ಬಳಸಿದ್ದಕ್ಕೆ ಕ್ಷಮೆ ಕೋರುತ್ತೇನೆ ಎಂದರು.

ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿಯನ್ನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಸೋಲಿಸಿದ್ದಾರೆ. ಈಗ ಮಂಡ್ಯದಲ್ಲಿ ನಿಜವಾದ ಹೀರೋ ಸುಮಲತಾ ಆಗಿದ್ದಾರೆ ಎಂದರು.

ಬಿ.ವೈ. ರಾಘವೇಂದ್ರರನ್ನು ಸೋಲಿಸೋಕೆ ಕೆ.ಎಸ್‌. ಈಶ್ವರಪ್ಪ ನಮ್ಮ ಬಳಿ ರಹಸ್ಯವಾಗಿ ಮಾತನಾಡಿದ್ದಾರೆ ಎಂದು ನಿಂಬೆಹಣ್ಣು ರೇವಣ್ಣ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ಈಗ ಹೇಳಿ ರೇವಣ್ಣ, ದೇವೆಗೌಡ್ರನ್ನು ಸೋಲಿಸೋಕೆ ಯಾರು ತೀರ್ಮಾನಿಸಿದ್ದಾರೆ ಕೇಳಿಕೊಂಡು ಬನ್ನಿ ಎಂದು ತಿರುಗೇಟು ನೀಡಿದರು.

ನಾವು ಭಾರತಾಂಬೆ ಮಕ್ಕಳು. ನೀಚ ಕೆಲಸ ಮಾಡಲ್ಲ. ಜಾತಿ ಲೆಕ್ಕಾಚಾರ ಹಾಕಿಕೊಂಡು ಚುನಾವಣೆ ಮಾಡಿದವರು ಈಗ ಚಿವುಟಿ ನೋಡಿಕೊಳ್ಳಲಿ. ದೇಶದಲ್ಲಿ ಜಾತಿವಾದ ನಡೆಯವುದಿಲ್ಲ, ರಾಷ್ಟ್ರವಾದ ನಡೆಯುತ್ತದೆ ಎಂಬುದು ಫಲಿತಾಂಶದಿಂದ ಸಾಬೀತಾಗಿದೆ ಎಂದರು.

ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲಿದ್ದಿಯಪ್ಪಾ..?:

ನಿಖಿಲ್‌ ಎಲ್ಲಿದಿಯಪ್ಪಾ ಎಂದು ಕುಮಾರಸ್ವಾಮಿ ಕೇಳಿದ್ದರು. ಈಗ ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲಿದಿಯಪ್ಪಾ ಎಂದು ಕೇಳುವಂತಾಗಿದೆ ಎಂದು ವ್ಯಂಗ್ಯವಾಡಿದರು.

ಒಂದು ವರ್ಷ ಆ ದೇವರು ನಿಮ್ಮನ್ನು ಕಾದಿದ್ದಾನೆ. ದೇವರು ಎಷ್ಟುಅಂತಾ ಕಾಯುತ್ತಾನೆ. ಹೋದಲೆಲ್ಲಾ ಹೇಳುತ್ತಿದ್ದೆ, ರೇವಣ್ಣನ ನೋಟು ರಾಘಣ್ಣನಿಗೆ ವೋಟು ಎಂದು. ಎಷ್ಟೇ ಹಣ ಖರ್ಚು ಮಾಡಿದರೂ ಬಿಜೆಪಿಯನ್ನು ಸೋಲಿಸೋಕೆ ಆಗಲ್ಲ ಎಂಬುದು ಸಾಬೀತಾಗಿದೆ ಎಂದರು.

ದೇಶದಲ್ಲಿ ಅತಿ ಹೆಚ್ಚು ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ರಾಷ್ಟ್ರಭಕ್ತನನ್ನು ಪ್ರಧಾನಿ ಮಾಡಿದ್ದೇವೆ. ಒಬ್ಬ ದಲಿತರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ. ಹಿಂದುಳಿದ ನಾಯಕನನ್ನು ಉಪರಾಷ್ಟ್ರಪತಿ ಮಾಡಿದ್ದೇವೆ. ಬಿಜೆಪಿಗೆ ಜಾತಿ ಪಾಠ ಮಾಡಬೇಡಿ ಸಿದ್ದರಾಮಯ್ಯನವರೇ ಎಂದು ವ್ಯಂಗವಾಡಿದ ಈಶ್ವರಪ್ಪ, ನಿಮ್ಮಂತಹ ಜಾತಿವಾದಿಗಳನ್ನು ಮತದಾರರು ಎಲ್ಲಿ ಇಡಬೇಕೆಂದು ತೀರ್ಮಾನಿಸಿದ್ದಾರೆ. ಇನ್ನಾದರೂ ತಪ್ಪನ್ನು ತಿದ್ದಿಕೊಂಡು ನಡೆಯಬೇಕು ಎಂದು ಸಲಹೆ ನೀಡಿದರು.

ಆತ್ಮಹತ್ಯೆ ಮಾಡಿಕೊಳ್ಳಬೇಡಿ:

ಸೋಲಿನಿಂದ ಕಂಗೆಟ್ಟು ಯಾರು ಕೂಡ ಇಂದು ರಾತ್ರಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರಿಗೆ ಈಶ್ವರಪ್ಪ ಲೇವಡಿ ಮಾಡಿದರು.

ಸಿದ್ದರಾಮಯ್ಯದುರಹಂಕಾರಿ ಎಂದು, ದಿನೇಶ್‌ ಗುಂಡೂರಾವ್‌ ಬಟ್ಟೆಹಾವು ಎಂದು ಹೇಳುತ್ತಿದ್ದೆ. ಈಗ ಇದೇ ಮಾತನ್ನು ಕಾಂಗ್ರೆಸ್‌ ಮುಖಂಡ ರೋಷನ್‌ ಬೇಗ್‌ ಹೇಳಿದ್ದಾರೆ ವೇಸ್ಟ್‌ ಬಾಡಿ ಎಂದು. ಈಗಲಾದರು ಇತಿಮಿತಿ ಅರಿತು ಹೇಳಿಕೆ ನೀಡಬೇಕೆಂದರು.

ವಾರದೊಳಗೆ ಸರ್ಕಾರ ರಚಿಸಿ:

ಬಿಜೆಪಿಗೆ ಬರುವವರನ್ನು ಬೇಡ ಎಂದು ಹೇಳಲಾಗುತ್ತಾ? ಯಡಿಯೂರಪ್ಪನವರೇ ಈಗ ಹಿಂದೆ ಮುಂದೆ ನೋಡಬೇಡಿ ಎಂದು ಅವರಿಗೆ ಮನವಿ ಮಾಡುತ್ತೇನೆ. ಒಂದು ವಾರದೊಳೊಗೆ ಸರ್ಕಾರ ರಚಿಸಿ ಎಂದು ಕರೆ ನೀಡಿದರು. ರಾಜ್ಯದಲ್ಲಿ ಎರಡು ಸ್ಥಾನ ಆ ಪಕ್ಷಗಳಿಗೆ ಹೇಗೆ ಬಂತು ಎಂದೇ ಗೊತ್ತಾಗುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ಕೆ. ಎಸ್‌. ಈಶ್ವರಪ್ಪ