ಅಮರಾವತಿ :  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಆಂಧ್ರ ಪ್ರದೇಶ ಸಿಎಂ ಎನ್‌. ಚಂದ್ರಬಾಬು ನಾಯ್ಡು ಅವರು ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವ ಸಂಕಲ್ಪ ತೊಟ್ಟಿದ್ದಾರೆ.

ಆಂಧ್ರಪ್ರದೇಶ ಪ್ರವಾಸದಲ್ಲಿರುವ ಸಿಎಂ ಕುಮಾರಸ್ವಾಮಿ ಅವರು, ಶುಕ್ರವಾರ ವಿಜಯವಾಡದಲ್ಲಿರುವ ಐತಿಹಾಸಿಕ ಪ್ರಸಿದ್ಧಿಯ ಕನಕ ದುರ್ಗಾ ದೇವಿಯ ದರ್ಶನ ಪಡೆದರು. ಈ ನಡುವೆ, ಪ್ರಾದೇಶಿಕ ಪಕ್ಷಗಳ ಒಟ್ಟುಗೂಡಿಸುವಿಕೆ ಬಗ್ಗೆ ಎಚ್‌ಡಿಕೆ ಹಾಗೂ ಚಂದ್ರಬಾಬು ನಾಯ್ಡು ಅವರು ಇಲ್ಲಿನ ಹೋಟೆಲ್‌ವೊಂದರಲ್ಲಿ ಸುಮಾರು 40 ನಿಮಿಷಗಳ ದೀರ್ಘಾವಧಿ ಚರ್ಚೆ ನಡೆಸಿದರು. ದಕ್ಷಿಣ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಒಟ್ಟುಗೂಡಬೇಕು ಎಂಬ ಅಭಿಪ್ರಾಯವನ್ನು ಉಭಯ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ ಎಂದು ಆಂಧ್ರಪ್ರದೇಶ ವಾರ್ತಾ ಇಲಾಖೆ ಪ್ರಕಟಣೆ ತಿಳಿಸಿದೆ.

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ‘ಮುಂದಿನ ಪ್ರಧಾನಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಮುಖ್ಯವಲ್ಲ. ಆದರೆ, ಎನ್‌ಡಿಎ ಸರ್ಕಾರವನ್ನು ಕಿತ್ತೊಗೆದು, ರಾಷ್ಟ್ರ ರಕ್ಷಣೆ ಮಾಡುವುದು ನಮ್ಮ ಗುರಿಯಾಗಿದೆ. ಹೆಚ್ಚೆಚ್ಚು ಪ್ರಾದೇಶಿಕ ಪಕ್ಷಗಳನ್ನು ಸೆಳೆದುಕೊಳ್ಳುವ ಅಗತ್ಯವಿದೆ’ ಎಂದರು. ಟಿಡಿಪಿ ಹಾಗೂ ಜೆಡಿಎಸ್‌ ಮೊದಲಿನಿಂದಲೂ ಭ್ರಾತೃತ್ವವನ್ನು ಹಂಚಿಕೊಳ್ಳುತ್ತವೆ ಎಂದೂ ಎಚ್‌ಡಿಕೆ ಹೇಳಿದರು. ಇನ್ನು ನಾಯ್ಡು ಪ್ರತಿಕ್ರಿಯಿಸಿ, ‘ಎಲ್ಲವನ್ನೂ ಸಂಕ್ಷಿಪ್ತವಾಗಿ ಚರ್ಚಿಸಲಾಯಿತು. ಸವಿಸ್ತಾರ ಚರ್ಚೆ ಅಗತ್ಯವಿದೆ’ ಎಂದು ಹೇಳಿದರು.