ಸಾಲಬಾಧೆಯಿಂದ ಬೇಸತ್ತು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿ.ಹೊಸೂರು ಗ್ರಾಮದಲ್ಲಿ ಗುರುವಾರ ಸಂಭವಿಸಿದ್ದು, ರೈತನ ಕೊನೆ ಆಸೆಯಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಂತಿಮ ದರ್ಶನ ಪಡೆದರು. ಬೆಳಗಾವಿಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದ ಕುಮಾರಸ್ವಾಮಿ ಮಂಡ್ಯಕ್ಕೆ ಕಾಪ್ಟರ್‌ನಲ್ಲಿ ಆಗಮಿಸಿ ಅಂತಿಮ ಆಸೆ ಈಡೇರಿಸಿದ್ದಾರೆ. ಜತೆಗೆ, ಮೃತನ ಕುಟುಂಬಕ್ಕೆ ₹1 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಮಂಡ್ಯ (ಏ.06): ಸಾಲಬಾಧೆಯಿಂದ ಬೇಸತ್ತು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿ.ಹೊಸೂರು ಗ್ರಾಮದಲ್ಲಿ ಗುರುವಾರ ಸಂಭವಿಸಿದ್ದು, ರೈತನ ಕೊನೆ ಆಸೆಯಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಂತಿಮ ದರ್ಶನ ಪಡೆದರು. ಬೆಳಗಾವಿಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದ ಕುಮಾರಸ್ವಾಮಿ ಮಂಡ್ಯಕ್ಕೆ ಕಾಪ್ಟರ್‌ನಲ್ಲಿ ಆಗಮಿಸಿ ಅಂತಿಮ ಆಸೆ ಈಡೇರಿಸಿದ್ದಾರೆ. ಜತೆಗೆ, ಮೃತನ ಕುಟುಂಬಕ್ಕೆ ₹1 ಲಕ್ಷ ಪರಿಹಾರ ಘೋಷಿಸಿದ್ದಾರೆ.
ನಂತರದ ಸುದ್ದಿಗಾರರೊಂದಿಗೆ ಮಾತನಾಡಿ, ₹1 ಲಕ್ಷ ಪರಿಹಾರ ನೀಡಿದ್ದು ದೊಡ್ಡ ಸಂಗತಿಯಲ್ಲ. ಮೃತ ರೈತನ ಒಬ್ಬ ಮಗಳು ಡಿಪ್ಲೊಮಾ ಓದುತ್ತಿದ್ದಾಳೆ. ಆಕೆ ವಿದ್ಯಾಭ್ಯಾಸಕ್ಕೆ, ಮುಂದಿನ ಕೆಲಸಕ್ಕೆ ಅನುಕೂಲ ಮಾಡಿಕೊಡುವ ಭರವಸೆ ಕೊಟ್ಟಿದ್ದೇನೆ. ಅಲ್ಲದೆ ಈ ಗ್ರಾಮಕ್ಕೆ ಮತ್ತೊಂದು ಬಾರಿ ಪ್ರತ್ಯೇಕವಾಗಿ ಬಂದು ಕುಟುಂಬದವರ ಸಮಸ್ಯೆ ಕೇಳುವುದಾಗಿ ಭರವಸೆ ನೀಡಿದ್ದೇನೆ ಎಂದರು.
‘‘ಮಾಜಿ ಸಿಎಂ ಕುಮಾರಸ್ವಾಮಿ ನನ್ನ ನೆಚ್ಚಿನ ರಾಜಕಾರಣಿ. ನಾನು ಸತ್ತ ನಂತರ ಅವರು ನನ್ನ ಶವವನ್ನು ಬಂದು ನೋಡಬೇಕು. ಏಕೆಂದರೆ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಆಗುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ’’ ಎಂದು ಶಿವಣ್ಣ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದರು.
ಶಿವಣ್ಣ ಅವರು, ೫ ಎಕರೆ ಜಮೀನು ಹೊಂದಿದ್ದು, ₹೫ ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲಮರುಪಾವತಿಗಾಗಿ ಬ್ಯಾಂಕ್‌ನಿಂದ ನೋಟಿಸ್ ಬಂದಿದ್ದರಿಂದ ಬೇಸತ್ತು ಜಮೀನು ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.