ಮೈತ್ರಿ ಸರ್ಕಾರದ ಅಸ್ತಿತ್ವ ಉಳಿಸಿಕೊಳ್ಳಲು ಒಕ್ಕಲಿಗ ನಾಯಕರು ಸತತ ಪ್ರಯತ್ನ ನಡೆಸುತ್ತಿದ್ದು, ಇತ್ತೀಚೆಗೆ ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಮೂಡಿದೆ. ಈ ನಿಟ್ಟಿನಲ್ಲಿ ಇದೀಗ ಸರ್ಕಾರದ ಮೂವರು ಪ್ರಭಾವಿ ಮುಖಂಡರು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. 

ಬೆಂಗಳೂರು : ಇತ್ತೀಚೆಗೆ ಆದಿಚುಂಚನಗಿರಿ ಶ್ರೀಗಳ ಜೊತೆ ರಹಸ್ಯವಾಗಿ ಹೆಚ್ ಡಿಕೆ ಬ್ರದರ್ಸ್ ಮತ್ತು ಡಿಕೆ ಶಿವಕುಮಾರ್ ಚರ್ಚೆ ನಡೆಸಿದ್ದಾರೆ. ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳ ಜೊತೆ ನಾಯಕರು ರಹಸ್ಯವಾಗಿ ಮಾತನಾಡಿದ್ದಾರೆ. 

ಇತ್ತೀಚೆಗಷ್ಟೇ ಸಿಎಂ ಕುಮಾರಸ್ವಾಮಿ ಅವರು ಕಣ್ಣೀರಿಟ್ಟಿದ್ದರು. ಈ ಘಟನೆ ಆದ ಬಳಿಕವೇ ಆದಿಚುಂಚನಗಿ ಶ್ರೀಗಳೊಂದಿಗೆ ಸುಮಾರು ಒಂದು ಗಂಟೆ ಕಾಲ ರಹಸ್ಯ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಸಿಎಂ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್ ಹಾಗೂ ಹೆಚ್.ಡಿ ರೇವಣ್ಣ ಅವರು ಭಾಗಿಯಾಗಿದ್ದರು. 

ನೀವು ಯಾವುದೇ ಕಾರಣಕ್ಕೂ ಎದೆಗುಂದಬೇಡಿ ಎಂದು ಈ ವೇಳೆ ಶ್ರೀಗಳು ಸಿಎಂಗೆ ಸಲಹೆ ನೀಡಿದ್ದು, ಸರ್ಕಾರ ‌ಬೀಳಲು ಅವಕಾಶ ಕೊಡಬೇಡಿ ಎಂದೂ ಹೇಳಿದ್ದಾರೆ. ಅಲ್ಲದೇ ಐದು ವರ್ಷ ಸರ್ಕಾರವನ್ನ ಉಳಿಸಿಕೊಂಡು ಹೋಗಬೇಕು. ಇದು ನಮಗೆ ಒಳ್ಳೆಯ ಅವಕಾಶವಾಗಿದ್ದು, ಇಂತಹ ಸಂದರ್ಭ ಮತ್ತೆ ಬರುವುದಿಲ್ಲ ಎಂದು ಶ್ರೀಗಳು ಕಿವಿ ಮಾತು ಹೇಳಿದ್ದಾರೆ ಎನ್ನಲಾಗಿದೆ. 

ಇನ್ನು ನೀವು ಯಾವುದೇ ಚಿಂತೆ ಮಾಡಬೇಡಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಶ್ರೀಗಳು ಆತ್ಮವಿಶ್ವಾಸ ತುಂಬಿದ್ದು, ಇದೇ ವೇಳೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರಿಗೂ ಕಿವಿಮಾತು ಹೇಳಿದ್ದಾರೆ. ನೀವು ಸಿಎಂ ಬೆನ್ನಿಗೆ ನಿಲ್ಲಬೇಕು. ಎಂಥಹ ಸಂದರ್ಭ ಬಂದರೂ ಸರ್ಕಾರಕ್ಕೆ ಬಂಡೆ ಗಲ್ಲಿನಂತೆ ನಿಲ್ಲಿ. ಸಮಾಜ ನಿಮ್ಮ ಮೇಲೆ ತುಂಬಾ ನಂಬಿಕೆ ಇಟ್ಟಿದೆ ಎಂದು ಹೇಳಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಸರ್ಕಾರದಲ್ಲಿ ಅನೇಕ ರೀತಿಯ ಗೊಂದಲಗಳು ಉಂಟಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.