ಮಳೆ ಬಂದು ಬೆಂಗಳೂರಲ್ಲಿ ಜನ ಪರದಾಡ್ತಿದ್ದಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕರು ಬಿಸಿಬೇಳೆ ಬಾತ್ ತಿನ್ನೋದ್ರಲ್ಲಿ ಬಿಝಿಯಾಗಿದ್ರು'
ಬೆಂಗಳೂರು(ಆ.17): ಮುಂದಿನ ಚುನಾವಣೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಸರ್ಕಾರದ ಹಗರಣಗಳನ್ನೆಲ್ಲ ಹೊರಗೆ ಹಾಕ್ತೀನಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಂತಕಲ್ ಕೇಸನ್ನು ಹಿಡಿದು ಜಗ್ಗಾಡಿದ್ದಾರೆ. ನಮ್ಮ ಸರ್ಕಾರ ಬರಲಿ ನೋಡ್ತೀನಿ' ಎಂದ ಅವರು ಲೂಟಿ ಹೊಡೆಯುವಲ್ಲಿ ಕಾಂಗ್ರೆಸ್ ಶಾಸಕರು, ಸಚಿವರು ತೊಡಗಿದ್ದಾರೆ.
ಭ್ರಷ್ಟಾಚಾರ ಮುಚ್ಚಿಹಾಕಲು ಸಮಿತಿ ರಚನೆ ಮಾಡಲಾಗ್ತಿದೆ. ಅರ್ಕಾವತಿ ಹಗರಣ ಮುಚ್ಚಿಹಾಕಲು ಕೆಂಪಣ್ಣ ಆಯೋಗ ರಚಿಸಲಾಗಿದೆ. ಮಳೆ ಬಂದು ಬೆಂಗಳೂರಲ್ಲಿ ಜನ ಪರದಾಡ್ತಿದ್ದಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕರು ಬಿಸಿಬೇಳೆ ಬಾತ್ ತಿನ್ನೋದ್ರಲ್ಲಿ ಬಿಝಿಯಾಗಿದ್ರು' ಎಂದು ಕಾಂಗ್ರೆಸ್ ನಾಯಕರ ಬಗ್ಗೆ ವ್ಯಂಗ್ಯವಾಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಯಾವುದೇ ಅಧಿಕಾರವಿಲ್ಲ
ಬಿಬಿಎಂಪಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಯಾವುದೇ ಅಧಿಕಾರವಿಲ್ಲ. ಬಿಬಿಎಂಪಿಯಲ್ಲಿ ಅಭಿವೃದ್ದಿ ಕೆಲಸಗಳು ಆಗಿಲ್ಲ. ಎಲ್ಲಾ ಅಧಿಕಾರ ಸಚಿವ ಜಾರ್ಜ್ ಕೈಯಲ್ಲಿದೆ. ಸಾವಿರಾರು ಕೋಟಿ ಹಣ ಬಿಬಿಎಂಪಿಯಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಹೈ ಪವರ್ ಕಮಿಟಿ ಮಾಡಿಕೊಂಡು ದುಡ್ಡು ಹೊಡೆಯುತ್ತಿದ್ದಾರೆ. ಇಂತಹವರಿಗೆ ಬೆಂಬಲ ಕೊಡಬೇಕಾ? ಬೆಂಬಲ ನೀಡುವ ಕುರಿತು ಪಾಲಿಕೆ ಸದಸ್ಯರ ಜೊತೆ ಸಭೆ ನಡೆಸಿ ಶೀಘ್ರವೇ ನಿರ್ಧಾರ ಮಾಡುವುದಾಗಿ ತಿಳಿಸಿದರು.
ಸಿಎಂಗೆ ಎಚ್ ಡಿಕೆ ಸವಾಲ್
ಗುಂಡ್ಲುಪೇಟೆ & ನಂಜನಗೂಡು ಉಪ ಚುನಾವಣೆಯಲ್ಲಿ ಹೇಗೆ ಸಿಎಂ ಗೆದ್ರು ಅಂತ ಗೊತ್ತಿದೆ. ಮುಂಬರುವ ಚುನಾವಣೆಯಲ್ಲಿ ಆ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲತ್ತೆ. ಆ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ತೋರಿಸಲಿ ಎಂದು ಎಚ್ ಡಿಕೆ ಸವಾಲ್ ಹಾಕಿದರು.
ಸಿಎಂ ಸಿದ್ದರಾಮಯ್ಯರಿಂದಲೇ ಕಾಂಗ್ರೆಸ್ ಮುಗಿದು ಹೋಗುತ್ತೆ. ಅವರೇ ಕಾಂಗ್ರೆಸ್ ಪಕ್ಷವನ್ನ ಮುಗಿಸುತ್ತಾರೆ. ಒಂದು ಪಕ್ಷವನ್ನ ಕಟ್ಟಲು ಆಗದವರು ನಮ್ಮ ಪಕ್ಷದ ಬಗ್ಗೆ ಮಾತಾಡ್ತಾರೆ. ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಜನರೇ ಪಾಠ ಕಲಿಸುತ್ತಾರೆ. ಸಿದ್ದರಾಮಯ್ಯರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮುಕ್ತವಾಗುತ್ತೆ' ಎಂದು ಸಿದ್ದರಾಮಯ್ಯ ವಿರುದ್ಧ ಎಚ್ ಡಿಕೆ ವಾಗ್ದಾಳಿ ನಡೆಸಿದರು.
