ಸಿದ್ದು ಅವರಪ್ಪನಾಣೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದು ಬರಲಿ

First Published 8, Apr 2018, 11:43 AM IST
HDK Anger on CM Siddaramaiah
Highlights

ಇಂತಹ ಬೆದರಿಕೆಗೆ ನಾವು ಹೆದರುವುದಿಲ್ಲ. ಚಾಮುಂಡೇಶ್ವರಿ ಮಾತ್ರವಲ್ಲ ಬಾದಾಮಿಯಲ್ಲೂ ಸಿಎಂ ಸ್ಪರ್ಧಿಸಲಿ. ಅಲ್ಲೂ ತಕ್ಕ ಸ್ಪರ್ಧೆ ನೀಡುತ್ತೇವೆ ಎಂದು ಹೇಳಿದರು

ಹುಬ್ಬಳ್ಳಿ/ಯಾದಗಿರಿ : ಮಾತು ಮಾತಿಗೆ ಅಪ್ಪನಾಣೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಅವರಪ್ಪನಾಣೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದು ಬರಲಿ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

‘ಅವರಪ್ಪನಾಣೆಗೂ ಕುಮಾರಸ್ವಾಮಿ ಸಿಎಂ ಆಗಲ್ಲ’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಶನಿವಾರ ಜೆಡಿಎಸ್ ರಾಜ್ಯಾಧ್ಯಕ್ಷ ತಿರುಗೇಟು ನೀಡಿದರು. ಸಿದ್ದರಾಮಯ್ಯ ಮನಸ್ಸು ಮಾಡಿದರೆ ಕುಮಾರಸ್ವಾಮಿ, ಯಡಿಯೂರಪ್ಪ ಅವರನ್ನು ಒಂದೇ ದಿನದಲ್ಲಿ ಸೋಲಿಸಬಲ್ಲೆ ಎಂದಿದ್ದಾರೆ. ಇದೆಲ್ಲ ಆಗದ ಮಾತು. ಇಂತಹ ಬೆದರಿಕೆಗೆ ನಾವು ಹೆದರುವುದಿಲ್ಲ. ಚಾಮುಂಡೇಶ್ವರಿ ಮಾತ್ರವಲ್ಲ ಬಾದಾಮಿಯಲ್ಲೂ ಸಿಎಂ ಸ್ಪರ್ಧಿಸಲಿ. ಅಲ್ಲೂ ತಕ್ಕ ಸ್ಪರ್ಧೆ ನೀಡುತ್ತೇವೆ ಎಂದು ಹೇಳಿದರು.

‘ಚುನಾವಣೆ ನಂತರ ಜೆಡಿಎಸ್‌ನ ಜಾತ್ಯತೀತ ನಿಲುವೇನು? ಎಂಬುದನ್ನು ಸ್ಪಷ್ಟಪಡಿಸಲಿ’ ಎಂಬ ರಾಹುಲ್‌ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದ ನಿಲುವು ಕೇಳಲು ರಾಹುಲ್ ಯಾರು? ಮೊದಲು ಅವರು ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ. ಅವರು ಕೇಳಿದ್ದಕ್ಕೆಲ್ಲ ಉತ್ತರಿಸಲು ನಾವೇನು ಗುಲಾಮರೇ? ಎಂದು ಕಿಡಿಕಾರಿದರು. ‘ಜೆಡಿಎಸ್‌ನಿಂದ ಹೊರ ಹೋದ ಶಾಸಕರನ್ನು ಉಳಿಸಿಕೊಳ್ಳಲಾಗಲಿಲ್ಲವಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿ, ಅವರನ್ನು ಉಳಿಸಿಕೊಳ್ಳುವಷ್ಟು ಹಣ ನನ್ನ ಬಳಿ ಇಲ್ಲ. ಮುಂದೆ ಅವರೇ ಪಾಶ್ಚಾತ್ತಾಪ ಪಡುತ್ತಾರೆ ಎಂದರು.

 

loader