ಜೆಡಿಎಸ್ ಎಲ್ಲಿದೆ? ಸತ್ತು ಹೋಯ್ತು ಅಂತ ಮುಖ್ಯಮಂತ್ರಿ ಹೇಳ್ತಾರೆ. ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಒಂದು ಪ್ರಾದೇಶಿಕ ಪಕ್ಷ ಉಳಿಯಬೇಕೆ ಬೇಡವೇ ಎಂಬ ನಿರ್ಧಾರ ಮಾಡುವವರು ಜನಗಳು.

ತುಮಕೂರು(ಡಿ.05): ‘ದೇವೇಗೌಡರ ಸೊಂಟ ಸರಿಯಿದೆ ಎಂದು ತೋರಿಸಲು ಎರಡು ಗಂಟೆಗಳ ಕಾಲ ರಾಲಿಯಲ್ಲಿ ನಿಂತು ಕೊಂಡು ಬಂದೆ.’ ದೇವೇಗೌಡರಿಗೆ ವಯಸ್ಸಾಗಿರುವುದರಿಂದ ನೆಟ್ಟಗೆ ನಿಂತುಕೊಳ್ಳಲೂ ಕಷ್ಟವಾಗುತ್ತಿದೆ ಎಂಬ ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರಿಗೆ ಮಾಜಿ ಪ್ರಧಾನಿ ದೇವೇಗೌಡ ಟಾಂಗ್ ನೀಡಿದ ಪರಿಯಿದು.

ಕೊರಟಗೆರೆಯಲ್ಲಿ ನಡೆದ ಜೆಡಿಎಸ್ ರಾಲಿಯಲ್ಲಿ ಎರಡು ಗಂಟೆ ನಿಂತುಕೊಂಡೇ ಬಂದ ದೇವೇಗೌಡರು ಬಳಿಕ ನಡೆದ ಸಮಾರಂಭದಲ್ಲಿ ಒಂದು ಗಂಟೆ ಕಾಲ ನಿರರ್ಗಳವಾಗಿ ಮಾತನಾಡಿದರು. ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಹೆಬ್ಬಯಕೆಯಿದೆಯೇ ಹೊರತು ನನ್ನ ಮಗನನ್ನು ಮುಖ್ಯಮಂತ್ರಿ ಮಾಡಬೇಕೆಂಬ ಆಸೆಯಿಲ್ಲ. ಕುಮಾರಸ್ವಾಮಿಗೆ ಎರಡು ಬಾರಿ ಆಪರೇಷನ್ ಆಗಿರುವುದರಿಂದ ಯುವಕರು ಕುಮಾರಣ್ಣ ಬಂದಾಗ ಪಟಾಕಿ ಹೊಡೆಯಬೇಡಿ ಅವರಿಗೆ ಆರೋಗ್ಯ ಸರಿಯಿಲ್ಲ ಎಂದು ಮನವಿ ಮಾಡಿದರು.

ಜೆಡಿಎಸ್ ಎಲ್ಲಿದೆ? ಸತ್ತು ಹೋಯ್ತು ಅಂತ ಮುಖ್ಯಮಂತ್ರಿ ಹೇಳ್ತಾರೆ. ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಒಂದು ಪ್ರಾದೇಶಿಕ ಪಕ್ಷ ಉಳಿಯಬೇಕೆ ಬೇಡವೇ ಎಂಬ ನಿರ್ಧಾರ ಮಾಡುವವರು ಜನಗಳು. ಜೆಡಿಎಸ್ ದೇವೇಗೌಡರ ಕುಟುಂಬದ ಆಸ್ತಿಯಲ್ಲ ಎಂದ ಅವರು, ಪಕ್ಷದ ಕಟ್ಟಡ ಹೋದಾಗ ಒಂಟಿಯಾಗಿ ಕುಳಿತು ಕಣ್ಣೀರು ಹಾಕಿದ್ದೇನೆ ಎಂದು ಭಾವುಕರಾದರು.