ಮಂಡ್ಯದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಅವರಿಗಿಂತ ರೇವಣ್ಣ ಅವರೇ ಹೆಚ್ಚು ಖಡಕ್ ಆಗಿ ವರ್ತಿಸುವ ಮೂಲಕ ಸೂಪರ್ ಸಿಎಂ ಆದರು.
ಮಂಡ್ಯ : ಸಿಎಂ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಮಂಡ್ಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿಗಳಿಗಿಂತ ಅವರ ಸಹೋದರ ರೇವಣ್ಣ ಅವರೇ ಹೆಚ್ಚು ಗರ್ಜಿಸಿದರು. ಉತ್ತರ ಕೊಡಲು ತಡವರಿಸಿದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ರೇವಣ್ಣ ಸೂಪರ್ ಸಿಎಂ ರೀತಿ ‘ಸಭೆಗೆ ಬಾರದವರನ್ನು ಬಲಿ ಹಾಕಿ’ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟರು.
ಮುಖ್ಯಮಂತ್ರಿಗಳು ಸಭೆ ನಡೆಸುತ್ತಾರೆ ಎಂದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರು ಹಾಜರಾಗುತ್ತಾರೆ. ಯಾಕೆ ಈ ರೀತಿ ವರ್ತನೆ ಮಾಡುತ್ತಾರೆ. ನೀವು ಮೊದಲೇ ಸ್ಪಷ್ಟಆದೇಶ ನೀಡಿರಲಿಲ್ಲವೇ ಎಂದು ಪ್ರಶ್ನೆ ಮಾಡಿದರು. ಸಭೆಗೆ ಬಾರದ ಯಾವುದೇ ಅಧಿಕಾರಿ ಇದ್ದರೂ ಪಟ್ಟಿಮಾಡಿ ಅಮಾನತುಗೊಳಿಸಿ ಮುಲಾಜು ನೋಡಬಾರದು ಎಂದು ಸಿಎಂ ಕಾರ್ಯದರ್ಶಿ ಸೆಲ್ವಕುಮಾರ್ ಅವರಿಗೆ ಆದೇಶ ನೀಡಿದರು.
ಸೆಲ್ಫಿಗೆ ಮುಗಿಬಿದ್ದ ಮಹಿಳೆಯರು
ಊಟ ಮುಗಿಸಿ ಮುಖಂಡರೊಂದಿಗೆ ಮಾತನಾಡುತ್ತಿದ್ದ ವೇಳೆ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಜೆಡಿಎಸ್‌ನ ಮಹಿಳಾ ಕಾರ್ಯಕರ್ತೆಯರು ತಾ ಮುಂದು ನಾ ಮುಂದು ಎಂದು ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.
