ಹಾಸನ [ಜೂ.27] : ಹಾಸನ ಕ್ಷೇತ್ರದ ನೂತನ ಸಂಸದ ಪ್ರಜ್ವಲ್ ರೇವಣ್ಣ ಅವರ ಸಂಸತ್ ಭಾಷಣಕ್ಕೆ ಎಚ್.ಡಿ.ರೇವಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯ ಕಡಿಮೆ ವಿಚಾರಗಳನ್ನು ಪ್ರಸ್ತಾಪಿಸಿದ್ದು, ಮುಂದಿನ ದಿನದಲ್ಲಿ ಇನ್ನಷ್ಟು ವಿಸ್ತಾರವಾಗಲಿದೆ. ಈ ಮೂಲಕ ಅವರು ರಾಜ್ಯದ ಹಿತ ಕಾಪಾಡಲಿ ಎಂದು ಪ್ರಜ್ವಲ್ ತಂದೆ ಸಚಿವ ರೇವಣ್ಣ ಹೇಳಿದ್ದಾರೆ. 

ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ರಾಜ್ಯದ ಇನ್ನೋರ್ವ ಸಂಸದ ಹೇಳಿದಾಗ ಸತ್ಯಾಸತ್ಯತೆಯನ್ನು ವಿವರಿಸಿದ್ದಾರೆ. ಐಎಂಎ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕರೋರ್ವರ ಹೆಸರು ಕೇಳಿ ಬಂದಿದ್ದು, ಬಳಿಕ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದನ್ನು ತಿಳಿಸಿದ್ದಾರೆ ಎಂದರು. 

ಕೇವಲ ಹಾಸನ ಸಂಸದರಾಗಿ ಸಂಸತ್ ನಲ್ಲಿ ಪ್ರಜ್ವಲ್ ಮಾತನಾಡದೇ , ರಾಜ್ಯದ ಪ್ರತಿನಿಧಿಯಾಗಿ ಮಾತನಾಡಿದ್ದಾರೆ ಎಂದು ಪುತ್ರನ ಬಗ್ಗೆ ಹೊಗಳಿಕೆಯ ಮಹಾಪೂರವನ್ನೇ ಹರಿಸಿದ್ದಾರೆ. 

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಮಂಡ್ಯದಲ್ಲಿ ರೈತರ ಆತ್ಮಹತ್ಯೆ, ಸಂಕಷ್ಟವನ್ನು ಸಂಸತ್ ನಲ್ಲಿ ಪ್ರಜ್ವಲ್ ವಿವರಿಸಿದ್ದಾರೆ. ನಮಗೆ ಮಂಡ್ಯ ಬೇರೆಯಲ್ಲ, ಹಾಸನ ಬೇರೆಯಲ್ಲ ಎಂದ ಎಚ್.ಡಿ.ರೇವಣ್ಣ ಸಂಸತ್ ನಲ್ಲಿ ಪುತ್ರ ಪ್ರಜ್ವಲ್ ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.