ಬೆಂಗಳೂರು[ಜು.09]: ಅತೃಪ್ತ ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಪತನವಾಗುವುದನ್ನು ತಡೆಯಲು ಉಭಯ ಪಕ್ಷಗಳ ಮುಖಂಡರು ನಾನಾ ಕಸರತ್ತು ಮಾಡುತ್ತಿದ್ದರೆ, ಇತ್ತ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರು ಬರಿಗಾಲಿನಲ್ಲಿ ವಿಧಾನಸೌಧಕ್ಕೆ ಆಗಮಿಸಿ ತಮ್ಮ ಕಚೇರಿ ಕೆಲಸ ನಿರ್ವಹಿಸಿ ಗಮನ ಸೆಳೆದರು.

ದೇವರು, ಶಾಸ್ತ್ರಗಳನ್ನು ನಂಬುವ ರೇವಣ್ಣ ಅವರು ಬರಿಗಾಲಲ್ಲಿ ಓಡಾಡುವುದು ಹೊಸದೇನು ಅಲ್ಲ. ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ, ಇಲ್ಲವೇ ಮತದಾನ ಮಾಡುವ ವೇಳೆ ಬರಿಗಾಲಲ್ಲಿ ಬರುತ್ತಿದ್ದರು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ವೇಳೆ ತಮ್ಮ ಪುತ್ರ ಪ್ರಜ್ವಲ್‌ ನಾಮಪತ್ರ ಸಲ್ಲಿಸುವ ವೇಳೆಯೂ ರಣ ಬಿಸಿಲಿನಲ್ಲೇ ನಡೆದುಕೊಂಡು ಬಂದಿದ್ದರು. ಹೀಗಿರುವಾಗ ಸೋಮವಾರ ವಿಧಾನಸೌಧಕ್ಕೆ ಬರಿಗಾಲಲ್ಲಿ ರೇವಣ್ಣ ಬರಲು ಕಾರಣ ಮಾತ್ರ ತಿಳಿಯಲಿಲ್ಲ.

ಆದರೆ ಸರ್ಕಾರ ಉಳಿಯುವಿಕೆ ಬಗ್ಗೆ ರೇವಣ್ಣ ಅವರಿಗೆ ಅನುಮಾನ ಇರುವ ಹಿನ್ನೆಲೆಯಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ ಬಾಕಿ ಕೆಲಸಗಳನ್ನು ಪೂರೈಸಲು ಕಚೇರಿಗೆ ಬಂದಿರಬಹುದು ಎಂಬ ಮಾತು ಮಾತ್ರ ವಿಧಾನಸೌಧ ಕಾರಿಡಾರ್‌ನಲ್ಲಿ ಕೇಳಿ ಬಂದಿತು.

ಬಿಜೆಪಿ ನಾಟಕ- ರೇವಣ್ಣ:

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಚ್‌.ಡಿ. ರೇವಣ್ಣ, ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿಯವರು ಕಳೆದ ಒಂದು ವರ್ಷದಿಂದ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಈಗ ಹೊಸ ನಾಟಕ ಶುರು ಮಾಡಿದ್ದಾರೆ. ಅತೃಪ್ತ ಶಾಸಕರ ರಾಜೀನಾಮೆಗೆ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.