ಬೆಂಗಳೂರು[ಜು.14]: ಮೈತ್ರಿ ಸರ್ಕಾರದ ಉಳಿವಿಗಾಗಿ ಟೆಂಪಲ್‌ ರನ್‌ ಮುಂದುವರಿಸಿರುವ ದೈವ ಭಕ್ತ ಸಚಿವ ಎಚ್‌.ಡಿ.ರೇವಣ್ಣ ಅವರು ನಗರದ ಗಣಪತಿ ದೇವಾಲಯದಲ್ಲಿ ಮೃತ್ಯುಂಜಯ ಹೋಮ ಮಾಡಿಸಿದರು.

ಇತ್ತೀಚೆಗೆ ಶಾರದಾಂಬೆ ದೇವಾಲಯ ಮತ್ತು ತಿರುಪತಿಗೆ ಹೋಗಿ ವಿಶೇಷ ಪೂಜೆ ಮಾಡಿಸಿಕೊಂಡು ಬಂದಿದ್ದ ರೇವಣ್ಣ ಶನಿವಾರ ನಗರದ ಜಯನಗರದಲ್ಲಿನ ಗಣಪತಿ ದೇವಾಲಯದಲ್ಲಿ ಮೃತ್ಯಂಜಯ ಹೋಮ ನೆರವೇರಿಸಿದರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡಲು ಸಭಾಧ್ಯಕ್ಷರನ್ನು ಕೋರಿದ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ಗೆಲುವಿಗಾಗಿ ಈ ಹೋಮ ನಡೆಸಿದ್ದಾರೆ. ಸರ್ಕಾರ ಸುಭದ್ರವಾಗಿರಲು ಎಂಟು ಅರ್ಚಕರಿಂದ ಮೃತ್ಯುಂಜಯ ಹೋಮ ಹಾಗೂ ಗಣಹೋಮ ಮಾಡಿಸಿದ್ದಾರೆ ಎಂದು ಹೇಳಲಾಗಿದೆ.

ಸರ್ಕಾರದ ಉಳಿವಿಗಾಗಿ ಕಳೆದ ಐದು ದಿನಗಳಿಂದ ಬರಿಗಾಲಿನಲ್ಲಿ ಓಡಾಡುತ್ತಿರುವ ರೇವಣ್ಣ ಅವರು ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವಲ್ಲಿ ನಿರತರಾಗಿದ್ದಾರೆ. ಮಿತ್ರ ಪಕ್ಷದ ಮುಖಂಡರೆಲ್ಲಾ ಅತೃಪ್ತರನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆ ರೇವಣ್ಣ ಮಾತ್ರ ದೇವಾಲಯಗಳ ಪ್ರವಾಸದಲ್ಲಿ ತೊಡಗಿದ್ದಾರೆ.