ಎಚ್.ವಿಶ್ವನಾಥ್ ಅವರ ಜೆಡಿಎಸ್ ಸೇರ್ಪಡೆ ಬಗ್ಗೆ ಪ್ರಜ್ವಲ್ ರೇವಣ್ಣ ನಿನ್ನೆ ಪರೋಕ್ಷ ಟೀಕೆ ಮಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ, "ಮಾಜಿ ಸಂಸದ ವಿಶ್ವನಾಥ್ ಹಿಂದುಳಿದ ವರ್ಗದ ನಾಯಕರಾಗಿದ್ದು, ಅವರ ಸೇರ್ಪಡೆಯಿಂದ ಯಾವುದೇ ಗೊಂದಲವಾಗಿಲ್ಲ. ಅವರಿಂದ ಪಕ್ಷಕ್ಕೆ ಬಲ ಬಂದಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು(ಜುಲೈ 07): ನಿನ್ನೆ ತಮ್ಮ ಪುತ್ರ ಪ್ರಜ್ವಲ್ ನೀಡಿದ್ದ ಹೇಳಿಕೆಗೆ ಹೆಚ್ಚಿನ ಮಹತ್ವ ಕೊಡಬೇಡಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಇಂದು ಹೇಳಿದ್ದಾರೆ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ತನ್ನ ಕುಟುಂಬದ ಬಗ್ಗೆಯೇ ಪರೋಕ್ಷವಾಗಿ ಟೀಕೆ ಮಾಡಿದ ಹಿನ್ನೆಲೆಯಲ್ಲಿ ಎಚ್.ಡಿ.ರೇವಣ್ಣ ಇಂದು ಸ್ಪಷ್ಟನೆ ನೀಡಿದ್ದಾರೆ.
"ಜೆಡಿಎಸ್'ನಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷದಲ್ಲಿ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಮಾತೇ ಅಂತಿಮ. ನಮ್ಮ ಕುಟುಂಬದಲ್ಲೇ ರಾಜಕಾರಣ ಮಾಡುವ ಪ್ರಮೇಯವೇ ಇಲ್ಲ," ಎಂದು ಸುವರ್ಣನ್ಯೂಸ್'ಗೆ ಸ್ಪಷ್ಟಪಡಿಸಿದ ರೇವಣ್ಣ, ಜೆಡಿಎಸ್'ನಿಂದ ತಮ್ಮ ಸೋದರ ಕುಮಾರಸ್ವಾಮಿಯೇ ಮುಂದಿನ ಸಿಎಂ ಅಭ್ಯರ್ಥಿ ಎಂದು ಹೇಳಿದ್ದಾರೆ.
"ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸುತ್ತೇವೆ. ದೇವೇಗೌಡರು ಇಚ್ಛಿಸಿದರೆ ಮಾತ್ರ ಸ್ಪರ್ಧಿಸುತ್ತೇವೆ," ಎಂದೂ ರೇವಣ್ಣ ತಿಳಿಸಿದ್ದಾರೆ.
ಇನ್ನು, ಎಚ್.ವಿಶ್ವನಾಥ್ ಅವರ ಜೆಡಿಎಸ್ ಸೇರ್ಪಡೆ ಬಗ್ಗೆ ಪ್ರಜ್ವಲ್ ರೇವಣ್ಣ ನಿನ್ನೆ ಪರೋಕ್ಷ ಟೀಕೆ ಮಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ, "ಮಾಜಿ ಸಂಸದ ವಿಶ್ವನಾಥ್ ಹಿಂದುಳಿದ ವರ್ಗದ ನಾಯಕರಾಗಿದ್ದು, ಅವರ ಸೇರ್ಪಡೆಯಿಂದ ಯಾವುದೇ ಗೊಂದಲವಾಗಿಲ್ಲ. ಅವರಿಂದ ಪಕ್ಷಕ್ಕೆ ಬಲ ಬಂದಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೂಲಗಳ ಪ್ರಕಾರ, ಪ್ರಜ್ವಲ್ ರೇವಣ್ಣ ಅವರು ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದರಂತೆ. ಆದರೆ, ಕಾಂಗ್ರೆಸ್'ನಿಂದ ಜೆಡಿಎಸ್'ಗೆ ಸೇರ್ಪಡೆಯಾಗಿರುವ ಎಚ್.ವಿಶ್ವನಾಥ್ ಅವರಿಗೆ ಹುಣಸೂರು ಕ್ಷೇತ್ರಕ್ಕೆ ಟಿಕೆಟ್ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ನಿನ್ನೆ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಪ್ರಜ್ವಲ್ ರೇವಣ್ಣ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
"ನಿಷ್ಠೆಯಿಂದ ಕೆಲಸ ಮಾಡುವವರನ್ನು ಹಿಂಬದಿ ಸೀಟಿನಲ್ಲಿ ಕೂರಿಸುತ್ತೇವೆ. ಸೂಟ್'ಕೇಸ್ ಕೊಟ್ಟವರನ್ನು ಮುಂದೆ ಕೂರಿಸುತ್ತೇವೆ. ಎರಡು ಪಕ್ಷಗಳಲ್ಲಿ ಕಾಲಿಟ್ಟುಕೊಂಡಿರುವ ಕೆಲ ನಾಯಕರಿದ್ದಾರೆ. ದೂರದ ಬೆಟ್ಟ ಕಣ್ಣಿಗೆ ನುಣ್ಣು ಅನ್ನುವ ಹಾಗೆ ಈ ನಾಯಕರ ನಡವಳಿಕೆ ಇದೆ," ಎಂದು ಪ್ರಜ್ಞಲ್ ರೇವಣ್ಣ ಗಂಭೀರ ಆರೋಪ ಮಾಡಿದ್ದರು.
