ಬೆಂಗಳೂರು[ಜು.19]: ರಾಜ್ಯ ರಾಜಕೀಯ ಪ್ರಹಸನ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಒಂದೆಡೆ ದೋಸ್ತಿ ಸರ್ಕಾರ ವಿಶ್ವಾಸಮತ ಯಾಚನೆ ಮುಂದೂಡಲು ಸರ್ವ ಪ್ಯತ್ನ ನಡೆಸುತ್ತಿದ್ದರೆ, ಇತ್ತ ಬಿಜೆಪಿ ನಾಯಕರು ವಿಶ್ವಾಸ ಮತ ಮಂಡಿಸಿ ಎಂದು ಪಟ್ಟು ಹಿಡಿದಿದ್ದಾರೆ. ಈ ನಡುವೆ ಶಾಸಕ ಸಿ. ಟಿ ರವಿ ಮೈತ್ರಿ ನಾಯಕರು ಹಾಗೂ ಸ್ಪೀಕರ್ ವಿರುದ್ಧ ಕಿಡಿ ಕಾರಿದ್ದಾರೆ.

ರಾಜ್ಯ ರಾಜಕೀಯ ಬೆಳವಣಿಗೆ ಹಾಗೂ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಸಾಶಕ ಸಿ. ಟಿ. ರವಿ 'ಸರ್ಕಾರ ಉಳಿಸಲು ಯಾವೆಲ್ಲಾ ಹೊಸ ಯೋಜನೆ ಹಾಕ್ತಾರೆ ಎನ್ನುವುದಕ್ಕೆ ನಿನ್ನೆಯ ಸದನ ಸಾಕ್ಷಿಯಾಗಿದೆ. ವಿಶ್ವಾಸಮತ ಯಾಚನೆಗೆ ತಡೆಯೊಡ್ಡುವ ಷಡ್ಯಂತ್ರ ನಡೆಸಲಾಗುತ್ತಿದ್ದು, ಸಂವಿಧಾನ‌ ಕಾಪಾಡ್ತೀನಿ ಅನ್ನೋ ಸ್ಪೀಕರ್ ಈ ಸಂಚನ್ನು ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ. 

ಸದನದಲ್ಲಿ ನಡೆದ ಹೈಡ್ರಾಮಾ ಕುರಿತಾಗಿ ಪ್ರತಿಕ್ರಿಯಿಸಿದ ಸಿ. ಟಿ. ರವಿ 'ಬಹುಮತ ಕಳೆದುಕೊಂಡರೂ ಬಿಜೆಪಿಯ ಆರೇಳು ಶಾಸಕರು ಕ್ರಾಸ್ ಓಟಿಂಗ್ ಮಾಡ್ತಾರೆ ಅಂತಿದೆ ಮೈತ್ರಿ. ಹಾಗಿದ್ದರೆ ವಿಶ್ವಾಸಮತ ಯಾಚನೆ ಮಾಡಲಿ. ರಾಜ್ಯದ ಆಡಳಿತ ಅರಾಜಕತೆಗೆ ಹೋಗ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ವೇಳೆ ಎಚ್. ಡಿ ದೇವೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಿ. ಟಿ. ರವಿ 'ದೊಡ್ಡ ಗೌಡರ ಸೂಚನೆ ಮನೆಯಲ್ಲಿ ಪಾಲಿಸಲಿ. ವಿಧಾನಸಭೆಯಲ್ಲಿ ರಾಜ್ಯಪಾಲರ ಸೂಚನೆ ಪಾಲಿಸಬೇಕು. ಅಂದು ನಂಬರ್ ಗೇಮ್ ನಿಂದ ಮುಖ್ಯಮಂತ್ರಿ ಆದ ಕುಮಾರಸ್ವಾಮಿ, ಇಂದು ಅದೇ ನಂಬರ್ ಗೇಮ್ ನಿಂದ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ನಿನ್ನೆ ಅನೇಕರು ಮೈಮೇಲೆ ಭೂತ ಬಂದಂತೆ ಆಡಿದ್ರು, ಇದಕ್ಕೆ ಕಾರಣ ನಾಳೆಯಿಂದ ಎಟಿಎಂ ಬಂದ್ ಆಗುತ್ತೆ' ಎಂದೂ ದೂರಿದ್ದಾರೆ.