ಬೆಂಗಳೂರು[ಜು.17]: ಸಾರ್ವಜನಿಕರಿಗೆ ಕೋಟ್ಯಂತರ ರು. ವಂಚನೆ ಮಾಡಿರುವ ಪ್ರಕರಣ ಸಂಬಂಧ ಶಾಸಕ ರೋಷನ್‌ಬೇಗ್‌ ಅವರನ್ನು ವಿಚಾರಣೆ ನೆಪದಲ್ಲಿ ಎಸ್‌ಐಟಿ ವಶಕ್ಕೆ ಪಡೆದಿರುವುದನ್ನು ಬಿಜೆಪಿ ಶಾಸಕರು ಖಂಡಿಸಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬ್ಲಾಕ್‌ಮೇಲ್‌ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಯಲಹಂಕದ ರಮಡ ರೆಸಾರ್ಟ್‌ನಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ಶಾಸಕರು, ನಾವು ಶಾಸಕರಿಗೆ ಅನ್ಯಾಯವಾಗಿರುವ ಕಾರಣ ಪಕ್ಷಾತೀತವಾಗಿ ಧ್ವನಿ ಎತ್ತಿದ್ದೇವೆ. ಮುಖ್ಯಮಂತ್ರಿಗಳು ಎಸ್‌ಐಟಿಯನ್ನು ಬಳಸಿಕೊಂಡು ದುರುದ್ದೇಶದಿಂದ ವಶಕ್ಕೆ ಪಡೆಯುವಂತೆ ಮಾಡಿದ್ದಾರೆ. ಶಾಸಕರ ಸುಧಾಕರ್‌ ಮೇಲೆ ಹಲ್ಲೆಯಾದ ವೇಳೆಯೂ ಅವರ ಪರವಾಗಿದ್ದೆವು. ಈಗ ರೋಷನ್‌ ಬೇಗ್‌ ಪರವಾಗಿದ್ದೇವೆ ಎಂದು ತಿಳಿಸಿದರು.

ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಶಾಸಕರನ್ನು ಬಂಧಿಸುವ ವಾಮಮಾರ್ಗ ಅನುಸರಿಸುತ್ತಿದ್ದಾರೆ. ತನಿಖೆ ಮಾಡುವುದು ತಪ್ಪಲ್ಲ. ಆದರೆ, ಎಸ್‌ಐಟಿ ಅಸ್ತ್ರವಾಗಿ ಬಳಿಸಿಕೊಂಡು ವಶಕ್ಕೆ ಪಡೆದುಕೊಳ್ಳುವುದು ಸರಿಯಲ್ಲ. ಸರ್ಕಾರ ಉಳಿಸಿಕೊಳ್ಳಲು ಇಂತಹ ಕ್ರಮ ಅನುಸರಿಸುವುದನ್ನು ಖಂಡಿಸುತ್ತೇವೆ ಎಂದು ಟೀಕಾಪ್ರಹಾರ ನಡೆಸಿದರು.

ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, ಬಹುಮತ ಸಾಬೀತುಪಡಿಸಲು ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಇದಾಗಿದೆ. ಮುಖ್ಯಮಂತ್ರಿಗಳು ಕ್ರಿಮಿನಲ್‌ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ. ಸರ್ಕಾರದ ನಡೆಯ ಬಗ್ಗೆ ಜನತೆ ಬೇಸತ್ತಿದ್ದಾರೆ. ಸಚಿವ ಎಚ್‌.ಡಿ.ರೇವಣ್ಣ ದೇವಾಲಯಗಳನ್ನು ಸುತ್ತುತ್ತಿರುವುದು ರಾಜ್ಯಕ್ಕೆ ಒಳ್ಳೆಯದಾಗಲಿ ಎಂಬ ಉದ್ದೇಶವಲ್ಲ. ಬದಲಿಗೆ ಅಧಿಕಾರ ಕೈ ತಪ್ಪದಿರಲಿ ಎಂದು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಮಾತನಾಡಿ, ಹಿರಿಯ ಶಾಸಕರಾಗಿರುವ ರೋಷನ್‌ ಬೇಗ್‌ ಅವರನ್ನು ಎಸ್‌ಐಟಿ ಜು.19ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಮೊದಲೇ ನೋಟಿಸ್‌ ನೀಡಲಾಗಿದೆ. ಹೀಗಿರುವಾಗ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಅವಶ್ಯಕತೆ ಏನು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ತಿಳಿಸಬೇಕು. ಎಸ್‌ಐಟಿ ಅಸ್ತ್ರ ಪ್ರಯೋಗಿಸುವ ಮೂಲಕ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಎಸ್‌ಐಟಿ ಸ್ವತಂತ್ರವಾಗಿ ಕೆಲಸ ಮಾಡಲು ಯಾವುದೇ ವಿರೋಧ ಇಲ್ಲ. ಶಾಸಕರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿರು ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.