ಹೊಸಕೋಟೆ[ಸೆ.22]: ಉಪ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ ರಾಜ್ಯ ನಾಯಕರು ಹಾಗೂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ‘ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಬಿಜೆಪಿಗಿಂತ ಜೆಡಿಎಸ್‌ ದೊಡ್ಡ ಶತ್ರು’, ‘ನನ್ನದು ಅತ್ಯಂತ ಕೆಟ್ಟಸರ್ಕಾರವಾಗಿತ್ತು’ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಕೂಡ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದಕ್ಕೆ ಈಗ ಆ ರೀತಿ ಮಾತನಾಡುತ್ತಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಮೈಸೂರಲ್ಲಿ ಶನಿವಾರ ಜೆಡಿಎಸ್‌ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನನ್ನ ನೇತೃತ್ವದ ದೋಸ್ತಿ ಸರ್ಕಾರ ಅತ್ಯಂತ ಕೆಟ್ಟಸರ್ಕಾರವಾಗಿತ್ತು. ಒಪ್ಪಿಕೊಳ್ಳುವೆ, ರೈತರಿಗೋಸ್ಕರ ದೋಸ್ತಿ ಸರ್ಕಾರ ನಡೆಸಿದೆ. ಮೈಸೂರು ಭಾಗದ ನಾಯಕರೊಬ್ಬರು ಜೆಡಿಎಸ್‌ ಅಧಿಕಾರಕ್ಕೆ ಬರುವುದಿಲ್ಲ, ಸಾಲ ಮನ್ನಾ ಹೇಗೆ ಮಾಡುತ್ತೀರಿ ಎಂದು ಪದೇ ಪದೆ ಹೇಳಿದರು. ಆದರೆ ನಾನು ಸ್ವತಂತ್ರವಾಗಿ ಅಧಿಕಾರವಿಲ್ಲದಿದ್ದರೂ ಸಾಲ ಮನ್ನಾ ಮಾಡಿ ತೋರಿಸಿದೆ ಎಂದು ಸಿದ್ದರಾಮಯ್ಯ ಹೆಸರೆತ್ತದೆ ಟಾಂಗ್‌ ನೀಡಿದರು.

ರಾಜ್ಯ ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್‌ ನಾಯಕರಿಗೆ ಬಿಜೆಪಿಗಿಂತ ಜೆಡಿಎಸ್‌ ಹೆಚ್ಚಿನ ಶತ್ರು ಪಕ್ಷವಾಗಿದೆ. ಕಾಂಗ್ರೆಸ್‌ನ ಕೇಂದ್ರ ನಾಯಕರ ಬಗ್ಗೆ ನಾನು ಮಾತನಾಡುತ್ತಿಲ್ಲ. ರಾಜ್ಯ ಕಾಂಗ್ರೆಸ್‌ ನಾಯಕರಲ್ಲಿ ಕೆಲವರಂತು ಜೆಡಿಎಸ್‌ ಮುಗಿಸಲು ನಿಂತಿದ್ದಾರೆ.

ಕಳೆದ ಬಾರಿ ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದಾಗ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಸೇರಿ ಮೈತ್ರಿ ಸರ್ಕಾರ ಮಾಡಿದೆವು. ಆದರೆ ಕಾಂಗ್ರೆಸ್‌ ಪಕ್ಷದಿಂದ ನನಗೆ ಸರಿಯಾದ ಬೆಂಬಲ ಸಿಗಲಿಲ್ಲವಾದ್ದರಿಂದ ನಾನು ಕೆಟ್ಟಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ಹೇಳಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಹೇಳಿಕೆಗಳಿಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಕಾಂಗ್ರೆಸ್‌ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದರಲ್ವಾ ಅದಕ್ಕೇ ಈ ಅವರು ಈ ರೀತಿ ಹೇಳುತ್ತಿರಬಹುದು ಎಂದು ‘ನನ್ನದು ಅತ್ಯಂತ ಕೆಟ್ಟಸರ್ಕಾರವಾಗಿತ್ತು’ ಎಂಬ ಕುಮಾರಸ್ವಾಮಿ ಆರೋಪಕ್ಕೆ ಕಿಡಿಕಾರಿದರು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.