ಕರಾವಳಿ ಗೋ ರಕ್ಷಕ ಗೂಂಡಾಗಳಿಗೆ ದನ ಸಾಕಲು ಕೊಟ್ಟರೆ ಒಪ್ಪುವರಾ..? ಎಚ್’ಡಿಕೆ ವಾಗ್ದಾಳಿ

First Published 7, Mar 2018, 1:38 PM IST
HD Kumaraswamy Slams Go Rakshak
Highlights

ಕರಾವಳಿಯಲ್ಲಿ ಈಗ ಗೋರಕ್ಷಕ ಗೂಂಡಾಗಳು ಹುಟ್ಟಿಕೊಂಡಿದ್ದಾರೆ. ಅಂಥವರಿಗೆ ಒಂದೊಂದು ದನ ಸಾಕಲು ನೀಡಬೇಕು. ಈ ಕೆಲಸ ಮಾಡಲು ಒಪ್ಕೋತಾರಾ?’

ಬೆಂಗಳೂರು : ‘ಕರಾವಳಿಯಲ್ಲಿ ಈಗ ಗೋರಕ್ಷಕ ಗೂಂಡಾಗಳು ಹುಟ್ಟಿಕೊಂಡಿದ್ದಾರೆ. ಅಂಥವರಿಗೆ ಒಂದೊಂದು ದನ ಸಾಕಲು ನೀಡಬೇಕು. ಈ ಕೆಲಸ ಮಾಡಲು ಒಪ್ಕೋತಾರಾ?’

ಮಂಗಳವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗೋರಕ್ಷಕರನ್ನು ಟೀಕೆ ಮಾಡಿದ ಪರಿಯಿದು.

ದೇಶದಲ್ಲಿ ಪ್ರತ್ಯೇಕ ಆಹಾರ ಪದ್ಧತಿಗಳಿವೆ. ಈ ರೀತಿಯ ಕೆಲಸಗಳಿಂದ ಸಮಾಜದ ಶಾಂತಿ ಕೆಡಿಸಲು ಹೊರಡಬೇಡಿ. ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ಮಾಡಿ ಎಂದು ಕಿವಿಮಾತು ಹೇಳಿದ ಅವರು ಇವರನ್ನೆಲ್ಲ ರಾರಾಜಿಸಲು ಬಿಟ್ಟದ್ದೇ ಸರ್ಕಾರದ ದೌರ್ಬಲ್ಯ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಹರಿಹಾಯ್ದರು.

ಗೋ ರಕ್ಷಕರನ್ನು, ಕೋಮು ಸೌಹಾರ್ದತೆ ಹಾಳುಗೆಡಹುವವರನ್ನು ಹಾಗೇ ಬಿಟ್ಟದ್ದೇ ಕಾಂಗ್ರೆಸ್ ಸರ್ಕಾರದ ವೀಕ್ ನೆಸ್. ಸಮಾಜಘಾತುಕ ವಾತಾವರಣ ಹಾಳು ಮಾಡುವವರು ಎಂಪಿ, ಎಂಎಲ್‌ಎಗಳೇ ಇರಲಿ, ಕಠಿಣ ಕ್ರಮ ಕೈಗೊಳ್ಳಬೇಕು. ಅಂಥವರ ಮೇಲೆ ಜಾಮೀನುರಹಿತ ಮೊಕದ್ದಮೆ ದಾಖಲಿಸಲು ಸರ್ಕಾರಕ್ಕೆ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಪ್ರಾರಂಭಿಕ ಹಂತದಲ್ಲೇ ಕ್ರಮ ಕೈಗೊಳ್ಳದೆ ಸುಮ್ಮನೆ ಕೂತರೆ ಸಮಸ್ಯೆ ಬಿಗಡಾಯಿಸುತ್ತದೆ.

ನಾನು ಸಿಎಂ ಆದರೆ ಪ್ರತಿ ತಿಂಗಳು ಕರಾವಳಿಯ ಪ್ರಮುಖ ಧರ್ಮಗಳ ಮುಖಂಡರನ್ನು ಕರೆಸಿ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಇಲ್ಲಿನ ಜನರ ಆತಂಕಕ್ಕೆ ಸಂಪೂರ್ಣ ತೆರೆ ಎಳೆಯುತ್ತೇನೆ. ಹಿಂದೆ ದಲಿತ- ಸವರ್ಣೀಯರ ನಡುವೆ ಇದ್ದ ಗಲಾಟೆಯ ಸ್ಥಾನದಲ್ಲಿ ಹಿಂದೂ- ಮುಸ್ಲಿಂ ಗಲಾಟೆಯನ್ನು ರೀಪ್ಲೇಸ್ ಮಾಡಲಾಗಿದೆ.

ಇದನ್ನು ಹುಟ್ಟುಹಾಕಿದ್ದೇ ರಾಜಕೀಯ ಕಾರಣಕ್ಕೆ. ರಾಜಕೀಯ ಪಕ್ಷಗಳು ತಮ್ಮ ಶಕ್ತಿ ಬೆಳೆಸಲು ಹೋಗಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಇಂಥ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

loader