Asianet Suvarna News Asianet Suvarna News

ಮುಂಬೈ, ಬೆಂಗಳೂರು ಹೈಡ್ರಾಮಾ: ಸಿಎಂ ಕುಮಾರಸ್ವಾಮಿ ಕಿಡಿ!

ಮುಂಬೈ, ವಿಧಾನಸೌಧ ಹೈಡ್ರಾಮಾಕ್ಕೆ ಸಿಎಂ ಕಿಡಿ| ಬಿಜೆಪಿ ಪ್ರಜಾಪ್ರಭುತ್ವದ ಎಲ್ಲ ಎಲ್ಲೆಗಳನ್ನೂ ಮೀರಿ ವರ್ತಿಸುತ್ತಿದೆ| ಡಿಕೆಶಿ, ಜೆಡಿಎಸ್‌ ಶಾಸಕರ ಪೊಲೀಸ್‌ ವಶ ಖಂಡನೀಯ: ಎಚ್‌ಡಿಕೆ

HD kumaraswamy Slams BJP For The political Drama At Vidhana Soudha And Mumbai
Author
Bangalore, First Published Jul 11, 2019, 8:25 AM IST
  • Facebook
  • Twitter
  • Whatsapp

ಬೆಂಗಳೂರು[ಜು.11]: ಮುಂಬೈ ಮತ್ತು ಬೆಂಗಳೂರಿನಲ್ಲಿ ನಡೆದ ಘಟನೆಗಳಿಂದ ಬಿಜೆಪಿ ಪ್ರಜಾಪ್ರಭುತ್ವದ ಎಲ್ಲ ಎಲ್ಲೆಗಳನ್ನೂ ಮೀರಿ ವರ್ತಿಸುತ್ತಿರುವುದು ಮತ್ತು ನಾಗರಿಕ ಸಂಹಿತೆಯನ್ನೂ ಮೀರಿರುವುದು ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬುಧವಾರ ಬೆಳಗ್ಗೆ ಮುಂಬೈಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಶಾಸಕರನ್ನು ಭೇಟಿ ಮಾಡಲು ತೆರಳಿದ್ದ ನನ್ನ ಸಹೋದ್ಯೋಗಿಗಳಾದ ಡಿ.ಕೆ.ಶಿವಕುಮಾರ್‌, ಜಿ.ಟಿ.ದೇವೇಗೌಡ, ಶಾಸಕರಾದ ಶಿವಲಿಂಗೇಗೌಡ, ಬಾಲಕೃಷ್ಣ ಅವರನ್ನು ಪೊಲೀಸ್‌ ವಶಕ್ಕೆ ಪಡೆದುಕೊಂಡು ಮಹಾರಾಷ್ಟ್ರ ಸರ್ಕಾರ ವರ್ತನೆ ಮಾಡಿರುವ ರೀತಿ ಖಂಡನೀಯ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕಟುವಾಗಿ ಟೀಕಿಸಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜನಪ್ರತಿನಿಧಿಗಳು, ಅದರಲ್ಲೂ ಸಚಿವರು ಮತ್ತು ಶಾಸಕರನ್ನು ಬೀದಿಯಲ್ಲಿ ನಿಲ್ಲಿಸಿ ವಶಕ್ಕೆ ಪಡೆದುಕೊಳ್ಳುವುದು ಮತ್ತು ಅಪರಾಧಿಗಳಂತೆ ಅವರನ್ನು ನಡೆಸಿಕೊಳ್ಳುವುದು ಶಿಷ್ಟಾಚಾರದ ಉಲ್ಲಂಘನೆ. ಮಾತ್ರವಲ್ಲ ಪಾಳೇಗಾರಿಕೆಯ ಮನೋಭಾವದ ಅನಾವರಣವಾಗಿದೆ. ಮಹಾರಾಷ್ಟ್ರದಲ್ಲಿರುವ ಬಿಜೆಪಿ ಸರ್ಕಾರ ನೆರೆಯ ರಾಜ್ಯದ ಸಚಿವರಿಗೆ, ಶಾಸಕರಿಗೆ ರಕ್ಷಣೆ ನೀಡಬೇಕಿತ್ತು. ಆದರೆ,ಅವರನ್ನು ಅಗೌರವದಿಂದ ಕಂಡಿರುವುದು ಸಮಂಜಸವಲ್ಲ. ಮಹಾರಾಷ್ಟ್ರ ಸರ್ಕಾರವು ನೆರೆಯ ರಾಜ್ಯದ ಸರ್ಕಾರವನ್ನು ಅಭದ್ರಗೊಳಿಸಲು ಸಹಕಾರ ನೀಡುತ್ತಿರುವುದು ಇದರಿಂದ ದೃಢಪಟ್ಟಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಶಾಸಕರನ್ನು ಹೊಟೇಲ್‌ನಲ್ಲಿ ಗೃಹಬಂಧನದಲ್ಲಿಡಲು ಮಹಾರಾಷ್ಟ್ರ ಸರ್ಕಾರ ಬಿಜೆಪಿಗೆ ಸಹಕಾರ ನೀಡಿರುವುದು ಇದರಿಂದ ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ವಿಧಾನಸೌಧದಲ್ಲಿ ಬುಧವಾರ ಸಂಜೆಯ ವೇಳೆ ಬಿಜೆಪಿ ಶಾಸಕರ ದುಂಡಾವರ್ತಿಯ ನಡವಳಿಕೆ ಜಿಗುಪ್ಸೆ ಹುಟ್ಟಿಸುವಂತಹದ್ದು. ಕಾಂಗ್ರೆಸ್‌ ಪಕ್ಷದ ಮುಖಂಡರು ಶಾಸಕರೊಂದಿಗೆ ಚರ್ಚೆ ನಡೆಸುತ್ತಿದ್ದ ಸಮಯದಲ್ಲಿ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ವರ್ತಿಸಿದ ರೀತಿ ವಿಧಾನಸೌಧಕ್ಕೆ ಅಷ್ಟೇ ಅಲ್ಲ, ಕರ್ನಾಟಕ ರಾಜಕಾರಣದ ಶ್ರೇಷ್ಠ ಪರಂಪರೆಗೂ ಮಸಿ ಬಳಿದಿದೆ. ಇಡೀ ರಾಷ್ಟ್ರ ಗಮನಿಸುತ್ತಿದೆ ಎಂಬ ಪರಿವೆಯೂ ಇಲ್ಲದೆ ಲಜ್ಜಾಹೀನರಾಗಿ ವರ್ತಿಸಿರುವುದು ಬೇಸರ ಉಂಟು ಮಾಡಿದೆ. ಇವರ ಅಧಿಕಾರದ ಹಪಾಹಪಿಯಿಂದ ನಡೆದ ಘಟನಾವಳಿಗಳಿಂದ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ನಗೆಪಾಟಲಿಗೀಡಾಗಿದೆ. ಬಿಜೆಪಿ ನಡೆಸುತ್ತಿರುವುದು ಪ್ರಜಾಪ್ರಭುತ್ವದ ರಾಜಕಾರಣವೋ ಅಥವಾ ದಮನಕಾರಿ ಮನೋಭಾವದ ವಿಕೃತ ಪ್ರದರ್ಶನವೋ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios