ಈಗ ಮೈತ್ರಿ ಸರ್ಕಾರದಿಂದ ಹೆಚ್.ಡಿ. ಕುಮಾರ ಸ್ವಾಮಿ ಭೇಟಿ ನೀಡಿದ್ದು, ಅಷ್ಟೇ ಅಲ್ಲದೆ ನಾನು ಈ ಹಿಂದೆ ತಲಕಾವೇರಿಗೆ ಬಂದು ಹೋಗಿದ್ದರಿಂದಲ್ಲೇ ಸಿಎಂ ಆಗಿದ್ದೇನೆ ಎಂದು ತಮ್ಮ ದೈವ ಸಿಕ್ರೇಟ್ ಬಿಚ್ಚಿಟ್ಟಿದ್ದಾರೆ.
ಮಡಿಕೇರಿ[ಅ.17]: ತಲಕಾವೇರಿಗೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೇವೆ ಎಂದು ಇದುವರೆಗೂ ರಾಜ್ಯದ ಯಾವುದೇ ಸಿಎಂ ಬಾಗಮಂಡಲಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಇಂದು ಸಿಎಂ ಕುಮಾರಸ್ವಾಮಿ ಕಾವೇರಿ ತೀರ್ಥೋದ್ಭವದಲ್ಲಿ ಭಾಗಿಯಾಗುವ ಮೂಲಕ ತಲತಲಾಂತರದ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ.
ಚಾಮರಾಜನಗರ, ತಲಕಾವೇರಿಗೆ ಹೋದರೆ ಸಿಎಂ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಡ್ಯಭಾವನೆ ಇಂದಿಗೂ ರಾಜಕಾರಣಿಗಳಲ್ಲಿ ಇದೆ. ಕೆಲವು ಮುಖ್ಯಮಂತ್ರಿಗಳು ಆ ಸ್ಥಳಗಳಿಗೆ ಹೋಗಿ ಕಾಕತಾಳಿಯವೋ ಎಂಬಂತೆ ಅಧಿಕಾರ ಕಳೆದುಕೊಂಡಿದ್ದು ಉಂಟು. ಮತ್ತೂ ಕೆಲವರು ಆ ಕಡೆ ತಲೆಯೇ ಹಾಕಿರಲಿಲ್ಲ. ಮೊದಲ ಬಾರಿಗೆ ಚಾಮರಾಜನಗರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಮೌಡ್ಯ ಮುರಿದಿದ್ದರು. ಅಲ್ಲದೆ 5 ವರ್ಷ ಅಧಿಕಾರ ಪೂರೈಸಿದ್ದರು. ಈಗ ಮೈತ್ರಿ ಸರ್ಕಾರದಿಂದ ಹೆಚ್.ಡಿ. ಕುಮಾರ ಸ್ವಾಮಿ ಭೇಟಿ ನೀಡಿದ್ದು, ಅಷ್ಟೇ ಅಲ್ಲದೆ ನಾನು ಈ ಹಿಂದೆ ತಲಕಾವೇರಿಗೆ ಬಂದು ಹೋಗಿದ್ದರಿಂದಲೇ ಸಿಎಂ ಆಗಿದ್ದೇನೆ ಎಂದು ತಮ್ಮ ದೈವ ಸಿಕ್ರೇಟ್ ಬಿಚ್ಚಿಟ್ಟಿದ್ದಾರೆ.
ತಲಕಾವೇರಿ ತೀರ್ಥೋದ್ಬವ
ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿಂದು ಕರುನಾಡಿನ ಜೀವನದಿ ಕಾವೇರಿಯ ತೀರ್ಥೋದ್ಭವವಾಯಿತು. ತುಲಾ ಸಂಕ್ರಮಣ ಕಾಲದಲ್ಲಿ ತೀರ್ಥರೂಪದಲ್ಲಿ ಕಾವೇರಿ ಉಗಮವಾಯ್ತು. ಭಾರೀ ಜಲಪ್ರಳಯದಿಂದ ತತ್ತರಿಸಿದ್ದ ಕೊಡಗಿನಲ್ಲಿ ಇಂದು ತೀರ್ಥೋದ್ಭವದ ಸಂಭ್ರಮ ಮನೆ ಮಾಡಿತ್ತು. ಬ್ರಹ್ಮ ಕುಂಡಿಕೆಯಿಂದ ತೀರ್ಥ ರೂಪದಲ್ಲಿ ಹುಕ್ಕಿಬರುವ, ಕಾವೇರಿಯನ್ನು ನೋಡಲು ಸಹಸ್ರಾರು ಜನರು ತಲಕಾವೇರಿಯಲ್ಲಿ ಜಮಾಯಿಸಿದ್ದರು.
ಸಂಜೆ 6:43ರ ತುಲಾ ಸಂಕ್ರಮಣ ಕಾಲದಲ್ಲಿ ತೀರ್ಥೋದ್ಭವವಾಯಿತು. ಪುಣ್ಯ ನದಿ ಕಾವೇರಿಯ ಮಂಗಳ ತೀರ್ಥ ಪಡೆಯಲು ಭಕ್ತಾಧಿಗಳು ಬಿಂದಿಗೆ ಹಿಡಿದು ತಲಕಾವೇರಿಗೆ ಆಗಮಿಸಿದ್ದು ಸಾಮಾನ್ಯವಾಗಿತ್ತು. ತಲಕಾವೇರಿಯ ಪ್ರದಾನ ಅರ್ಚಕ ನಾರಾಯಣಾಚಾರ್ ನೇತೃತ್ವದಲ್ಲಿ 25 ಅರ್ಚಕರ ವೃಂದ ತೀರ್ಥೋದ್ಭವ ಪೂಜೆಯನ್ನು ಸಾಂಗವಾಗಿ ನೆರವೇರಿಸಲಾಗಿತ್ತು.
