ಬಸ್‌ನೊಳಗೇ ಬೆಡ್‌ರೂಂ, ಟಾಯ್ಲೆಟ್, ಅಡುಗೆ ಮನೆ | ತ.ನಾಡಿನಲ್ಲಿ ಸಜ್ಜಾಗುತ್ತಿದೆ ಬಸ್

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣಾ ಅಖಾಡಕ್ಕೆ ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳು ಸದ್ದಿಲ್ಲದೆ ತಯಾರಿ ನಡೆಸಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಚುನಾವಣಾ ಪ್ರಚಾರಕ್ಕೆ ಹೈಟೆಕ್ ಮಾದರಿಯ ಬಸ್ ಸಿದ್ಧಗೊಳ್ಳುತ್ತಿದೆ.

ತಮಿಳುನಾಡಿನಲ್ಲಿ ಅಶೋಕ್ ಲೇಲ್ಯಾಂಡ್ ಕಂಪನಿಗೆ ಸೇರಿದ ಬಸ್ ಅನ್ನು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಪ್ರಚಾರಕ್ಕೆ ಬೇಕಾದಂತೆ ಸಿದ್ಧತೆ ಮಾಡಲಾಗುತ್ತಿದೆ. ಈಗಾಗಲೇ ಜುಲೈನಿಂದಲೇ ಬಸ್‌ನ ಒಳ ವಿನ್ಯಾಸ ನಡೆಯುತ್ತಿದೆ.

ಈ ಅತ್ಯಾಧುನಿಕ ಬಸ್‌ನಲ್ಲಿ ಬೆಡ್‌ರೂಮ್, ಸಣ್ಣ ಮೀಟಿಂಗ್ ಹಾಲ್, ಅಡುಗೆ ಮಾಡಲು ಕೊಠಡಿ, ಶೌಚಾಲಯ, ಹೈಡ್ರಾಲಿಕ್ ಲಿಫ್ಟ್, ಸನ್‌ರೂಫ್, ಹವಾನಿಯಂತ್ರಣ ವ್ಯವಸ್ಥೆ ಇರುವ ಬಸ್ ಇದಾಗಿದೆ. ನಾಲ್ಕು ಜನ ಬಸ್ ಒಳಗೆ ಪ್ರಚಾರದ ವೇಳೆ ನಿಲ್ಲಲು ಅವಕಾಶ ಕಲ್ಪಿಸಲಾಗಿದೆ.

ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೋಹಿತ್ ಅಲ್ತಾಫ್ ನೇತೃತ್ವದಲ್ಲಿ ಬಸ್ ಸಿದ್ಧತಾ ಕಾರ್ಯದ ಹೊಣೆ ಹೊತ್ತಿದ್ದಾರೆ. ನವೆಂಬರ್ 1ರಂದು ಬಸ್ ಉದ್ಘಾಟನೆಯಾಗಲಿದ್ದು, ಮೈಸೂರಿನಿಂದ ಕುಮಾರಸ್ವಾಮಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕುಮಾರಸ್ವಾಮಿ ಸುಮಾರು ಮೂರು ತಿಂಗಳ ಕಾಲ ರಾಜ್ಯಾದ್ಯಂತ ಪ್ರಚಾರ ಕೈಗೊಳ್ಳಲಿದ್ದಾರೆ. ಇತ್ತೀಚೆಗೆ ಅವರ ಆರೋಗ್ಯ ಹದಗೆಟ್ಟಿದ್ದು, ಹೀಗಾಗಿ ಬಸ್‌ನಲ್ಲಿ ಬೇಕಾದ ಅಗತ್ಯ ಸೌಲಭ್ಯಗಳನ್ನು ಮಾಡಲಾಗುತ್ತಿದೆ. ಪ್ರಚಾರದ ವೇಳೆ ಅವರು ಬಸ್‌ನಲ್ಲಿಯೇ ಉಳಿದು ಕೊಳ್ಳುವ ಮೂಲಕ ದಣಿವು ಆರಿಸಿಕೊಳ್ಳಬಹುದು.

ಅಲ್ಲದೆ, ಪ್ರಚಾರದ ವೇಳೆ ಸ್ಥಳೀಯ ಪಕ್ಷದ ಮುಖಂಡರನ್ನು ಬಸ್‌ನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಬಹುದು. ಇಂತಹ ವ್ಯವಸ್ಥೆಯನ್ನು ಬಸ್ ಹೊಂದಿದೆ ಎಂದು ಜೆಡಿಎಸ್ ಮುಖಂಡರೊಬ್ಬರು ಬಸ್ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು.