ಬೆಂಗಳೂರು[ಜ.27]: ಕಾಂಗ್ರೆಸ್‌ ನಾಯಕರು ಶಿಫಾರಸು ಮಾಡಿದ ಒಂದು ತಿಂಗಳ ಬಳಿಕ ಕೊನೆಗೂ ಡಾ.ಅಜಯ್‌ಸಿಂಗ್‌ ಅವರನ್ನು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

ಕಾಂಗ್ರೆಸ್‌ ಹೈಕ​ಮಾಂಡ್‌ ಡಿಸೆಂಬರ್‌ ಕೊನೆಯ ವಾರದಲ್ಲಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಅವ​ರಿಗೆ ನಿಗಮ ಮಂಡಳಿ ನೇಮ​ಕಾತಿ ಕುರಿತು ಮಾಡಿದ್ದ ಶಿಫಾ​ರ​ಸಿ​ನಲ್ಲಿ ಜೇವರ್ಗಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಧರಂಸಿಂಗ್‌ ಪುತ್ರ ಅಜಯ್‌ಸಿಂಗ್‌ ಅವರನ್ನು ವಿಶೇಷ ಪ್ರತಿನಿಧಿಯಾಗಿ ನೇಮಿಸುವಂತೆಯೂ ಸೂಚಿ​ಸ​ಲಾ​ಗಿತ್ತು. ಎರಡು ನಿಗಮ ಮಂಡಳಿ ಹಾಗೂ ದೆಹಲಿ ವಿಶೇಷ ಪ್ರತಿ​ನಿಧಿ ನೇಮಕಾತಿ​ಯನ್ನು ಮುಖ್ಯಮಂತ್ರಿ ಕುಮಾ​ರ​ಸ್ವಾಮಿ ತಡೆ​ಹಿ​ಡಿ​ದಿ​ದ್ದ​ರು. ಇದು ಕಾಂಗ್ರೆಸ್‌ ಶಾಸ​ಕರ ಆಕ್ರೋ​ಶಕ್ಕೆ ಕಾರ​ಣ​ವಾ​ಗಿತ್ತು.

ಇತ್ತೀ​ಚೆಗೆ ನಡೆದ ಸಮ​ನ್ವಯ ಸಮಿತಿ ಸಭೆ​ಯಲ್ಲಿ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವರು ಎಐ​ಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಮೂಲಕ ಬಂದಿ​ರುವ ನೇಮ​ಕಾತಿ ಶಿಫಾ​ರ​ಸನ್ನು ತಡೆ​ಹಿ​ಡಿ​ಯು​ವುದು ನೇರ​ವಾಗಿ ಅವ​ರಿಗೆ ಅವ​ಮಾನ ಮಾಡಿ​ದಂತೆ ಆಗು​ತ್ತದೆ. ಹೀಗಾಗಿ ತಡೆ​ಹಿ​ಡಿ​ದಿ​ರುವ ನೇಮ​ಕಾತಿ ಕುರಿತ ಆದೇಶ ಕೂಡಲೇ ಹೊರ​ಡಿ​ಸಬೇಕು ಎಂದು ಒತ್ತಾ​ಯಿ​ಸಿ​ದ್ದರು. ಇದಕ್ಕೆ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಒಪ್ಪಿದ್ದು, ಆದೇಶ ಹೊರ​ಡಿ​ಸು​ವು​ದಾಗಿ ತಿಳಿ​ಸಿ​ದ್ದರು. ಅದರಂತೆ ಕಡತಕ್ಕೆ ಸಹಿ ಹಾಕಿದ್ದಾರೆ.