ರಾಜಕೀಯ ಜಂಜಾಟದಿಂದ ಹೊಸ ವರ್ಷದ ಹೊಸ್ತಿಲಿನಲ್ಲಿ ದೂರವಿದ್ದು, ವಿಶ್ರಾಂತಿ ಪಡೆಯುವುದರ ಜತೆಗೆ ಹೊಸ ವರ್ಷವನ್ನು ಆಚರಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಸಿಂಗಾಪುರಕ್ಕೆ ತೆರಳುತ್ತಿದ್ದಾರೆ.
ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ರಾಜಕೀಯ ಜಂಜಾಟದಿಂದ ಹೊಸ ವರ್ಷದ ಹೊಸ್ತಿಲಿನಲ್ಲಿ ದೂರವಿದ್ದು, ವಿಶ್ರಾಂತಿ ಪಡೆಯುವುದರ ಜತೆಗೆ ಹೊಸ ವರ್ಷವನ್ನು ಆಚರಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬ ಸಮೇತರಾಗಿ ವಿದೇಶಕ್ಕೆ ಪ್ರಯಾಣಿಸಲಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಹೊಸ ವರ್ಷದ ಸಂಭ್ರಮವನ್ನು ಕುಮಾರಸ್ವಾಮಿ ಕುಟುಂಬವು ವಿದೇಶದಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದು, ಈ ವರ್ಷವೂ ಸಹ ವಿದೇಶದಲ್ಲಿ ನೂತನ ವರ್ಷವನ್ನು ಬರಮಾಡಿಕೊಳ್ಳಲಿದೆ. ಈ ಬಾರಿ ಸಿಂಗಾಪುರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್ ಅವರೊಂದಿಗೆ ಕುಮಾರಸ್ವಾಮಿ ಅವರು ಶುಕ್ರವಾರ (ಡಿ.28) ಸಿಂಗಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಐದು ದಿನಗಳ ಕಾಲ ಸಿಂಗಾಪುರದಲ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಆರೋಗ್ಯಕ್ಕೂ ವಿಶ್ರಾಂತಿ ಅಗತ್ಯ ಇರುವ ಹಿನ್ನೆಲೆಯಲ್ಲಿ ವಿದೇಶ ಪ್ರವಾಸ ಸಹಕಾರಿಯಾಗಲಿದೆ. ಜ.2ರಂದು ರಾಜ್ಯಕ್ಕೆ ಪ್ರವಾಸ ಮುಗಿಸಿ ಹಿಂತಿರುಗಲಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಅವರು ಕೈಗೊಳ್ಳುತ್ತಿರುವ ಮೊದಲ ವಿದೇಶ ಪ್ರವಾಸವಿದು.
