ಮಾಜಿ ಪ್ರಧಾನಿ  ಎಚ್.ಡಿ.ದೇವೇಗೌಡ ಅವರು  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಇದೇ ವೇಳೆ ಡಿ.ಕೆ.ಶಿವಕುಮಾರ್ ನಡುವಿನ ವ್ಯತ್ಯಾಸದ ಬಗ್ಗೆಯೂ ಕೂಡ ಮಾತನಾಡಿದ್ದಾರೆ. 

ಬಳ್ಳಾರಿ : ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವುದು ಅಧಿಕಾರದ ದಾಹಕ್ಕಲ್ಲ. ದೇಶದಲ್ಲಿ ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕು. ಕೇಂದ್ರದಲ್ಲಿರುವ ಪ್ರಧಾನಿ ಮೋದಿ ಅವರ ಕೆಟ್ಟಆಡಳಿತವನ್ನು ತೊಲಗಿಸಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್‌ ಜೊತೆಗೂಡಿದ್ದೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತಿಳಿಸಿದರು.

ನಗರದ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಹಯೋಗದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಸಿಬಿಐ, ಇಡಿ ಸೇರಿ ಎಲ್ಲ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿರೋಧ ಪಕ್ಷಗಳನ್ನು ಸಂಪೂರ್ಣವಾಗಿ ದಮನ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಪ್ರಾದೇಶಿಕ ಪಕ್ಷಗಳನ್ನು ಹತ್ತಿಕ್ಕುವ ಕುತಂತ್ರಕ್ಕೆ ಕೈ ಹಾಕಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡದೆ, ಎಲ್ಲ ದೌರ್ಜನ್ಯದ ನೀತಿಗಳನ್ನು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅನುಸರಿಸುತ್ತಿದ್ದಾರೆ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್‌ ಹಾಗೂ ನಮ್ಮ ನಡುವೆ ಒಂದಷ್ಟು ವ್ಯತ್ಯಾಸಗಳು ಇದ್ದದ್ದು ನಿಜ. ಆದರೆ, ಜಾತ್ಯತೀತ ಶಕ್ತಿಗಳು ಬಲಗೊಳ್ಳಬೇಕು ಎಂಬ ಕಾರಣಕ್ಕಾಗಿಯೇ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಈ ಒಗ್ಗಟ್ಟು ಸದಾ ಮುಂದುವರಿಯಲಿದೆ. ದೇಶದ ಸಮಗ್ರತೆ ಹಾಗೂ ಐಕ್ಯತೆ ದೃಷ್ಟಿಯಿಂದ ನಾವೆಲ್ಲರೂ ಜೊತೆಗೂಡಿ ಹೋರಾಟ ನಡೆಸುವುದು ಅನಿವಾರ್ಯವೂ ಆಗಿದೆ ಎಂದು ದೇವೇಗೌಡರು ತಿಳಿಸಿದರು.

ಉತ್ತರ ಪ್ರದೇಶದಲ್ಲಿ ಹಿಂದು-ಮುಸ್ಲಿಮರ ಒಪ್ಪಿತ ಮದುವೆಗಳಿಗೂ ಬಿಜೆಪಿಯವರು ಗಲಾಟೆ ಎಬ್ಬಿಸಿದರು. ಗೋದ್ರಾ ಹತ್ಯಾಕಾಂಡ, ಬಾಬ್ರಿ ಮಸೀದಿ ಧ್ವಂಸ ಸೇರಿದಂತೆ ಕೋಮು ಸೌಹಾರ್ದವನ್ನು ಹಾಳುವ ಮಾಡುವ ಎಲ್ಲ ಪ್ರಯತ್ನಗಳನ್ನು ಬಿಜೆಪಿ ಮಾಡಿತು. ಪ್ರಧಾನಿ ಮೋದಿ ಸ್ವರಾಜ್ಯದಲ್ಲಿಯೇ ದಲಿತರಿಗೆ ರಕ್ಷಣೆ ಸಿಗುತ್ತಿಲ್ಲ. ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದ್ದರೂ ನಿಯಂತ್ರಿಸುವ ಕಾಳಜಿ ತೆಗೆದುಕೊಂಡಿಲ್ಲ.

ಈ ಎಲ್ಲವೂ ಜಾತ್ಯತೀತ ಶಕ್ತಿಗಳು ನಲುಗುವಂತಾಗಿದ್ದು, ಬಿಜೆಪಿಯ ಅತ್ಯಂತ ಕೆಟ್ಟಆಡಳಿತಕ್ಕೆ ಇತಿಶ್ರೀ ಹಾಡಬೇಕು ಎಂಬ ಕಾರಣಕ್ಕಾಗಿಯೇ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಾವು ಒಂದಾಗಿದ್ದೇವೆ. ದೇಶದಲ್ಲಿ ಜಾತ್ಯತೀತ ಶಕ್ತಿಗಳನ್ನು ಬಲಪಡಿಸುತ್ತೇವೆ. ಜನವಿರೋಧಿ ಬಿಜೆಪಿ ಆಡಳಿತವನ್ನು ನಿಯಂತ್ರಣಕ್ಕೆ ತರುತ್ತೇವೆ ಎಂದು ತಿಳಿಸಿದರು.