‘ಹೆಚ್ಚು ಆಯಸ್ಸು ಸಿಕ್ಕರೂ ಪಕ್ಷ ನಿರ್ನಾಮ ನಿಮಿಂದಾಗದು: ದೇವೇಗೌಡ

ಮಂಡ್ಯ/ನಾಗಮಂಗಲ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿ 2004ರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಮನೆಗೆ ಐದು ಬಾರಿ ಹೋಗಿದ್ದರೂ ಅವರು ಒಪ್ಪಿರಲಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ಮಂಡ್ಯ ಜಿಲ್ಲೆಯ ಬೆಳ್ಳೂರಿನಲ್ಲಿ ಜೆಡಿಎಸ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನ ವ್ಯವಹಾರ ಗೊತ್ತಿದ್ದ ಸೋನಿಯಾ ಗಾಂಧಿ ಸುತಾರಾಂ ಒಪ್ಪಲಿಲ್ಲ ಎಂದು ಹೇಳಿದರು. ಈ ವಿಷಯವಾಗಿ ಸೋನಿಯಾ ಗಾಂಧಿ ಅವರ ಕಾಲು ಹಿಡಿಯುವುದೊಂದು ಬಾಕಿ ಇತ್ತು. ಈ ಘಟನೆಗೆ ಪಿ.ಜಿ.ಆರ್.ಸಿಂಧ್ಯಾ ಮತ್ತು ಎಂ.ಪಿ.ಪ್ರಕಾಶ್ ಅವರೇ ಸಾಕ್ಷಿ. ನಮ್ಮಿಂದ ಇಷ್ಟೆಲ್ಲಾ ಅನುಕೂಲ ಪಡೆದಿರುವ ಸಿದ್ದರಾಮಯ್ಯನಿಗೆ ಜೀವನದಲ್ಲಿ ದೈವಶಕ್ತಿಯ ಮೇಲೆ ನಂಬಿಕೆಯಿದ್ದರೆ ಮುಂದೆ ಬಂದು ಹೇಳಲಿ ಎಂದು ದೇವೇಗೌಡ ಪಂಥಾಹ್ವಾನ ನೀಡಿದರು.

‘ದೇವರು ನಿನಗೆ ಇನ್ನೂ 30 ವರ್ಷ ಆಯಸ್ಸು ಹೆಚ್ಚು ಕೊಡಲಿ. ಆಗಲೂ ನಮ್ಮ ಪಕ್ಷವನ್ನು ನೀನು ಮತ್ತು ಜೆಡಿಎಸ್‌ನಿಂದ ಅಮಾನತಾಗಿ ನಿನ್ನೊಂದಿಗಿರುವ ಏಳು ಮಂದಿ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ದೇವೇಗೌಡರು ಹೋದ ಮೇಲೂ ಈ ಪಕ್ಷವನ್ನು ಏನೂ ಮಾಡಲು ಸಾಧ್ಯವಿಲ್ಲ. ಜನ ಉಳಿಸುತ್ತಾರೆ ಕಣ್ರಿ. ಹೀಗಾಗಿ ಸಿದ್ದರಾಮಯ್ಯ ಇನ್ನೂ 30 ವರ್ಷ ಬದುಕಿದ್ದು ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನಮ್ಮ ಪಕ್ಷ ಹೇಗೆ ಮೇಲೆ ಬರುತ್ತದೆ ಎನ್ನುವುದನ್ನು ನೋಡಿ ಖುಷಿಪಡಲಿ ಎಂದರು.

ಚೆಲುವರಾಯ ಸ್ವಾಮಿ ಕ್ಷೇತ್ರವಾದ ನಾಗಮಂಗಲದ ಚುನಾವಣಾ ಕಣ ನನ್ನ ಮತ್ತು ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನಡುವೆ ನಡೆಯುವ ಜಿದ್ದಾಜಿದ್ದಿಯಾಗಿದೆ ಎಂದು ತಿಳಿಸಿದರು.