Asianet Suvarna News Asianet Suvarna News

ಲೋಕಸಭಾ ಚುನಾವಣೆಗೆ ಯಾರೊಂದಿಗೆ ಗೌಡರ ಮೈತ್ರಿ

ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಜೊತೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರದ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಯಾವ ಯಾವ ಕ್ಷೇತ್ರಗಳನ್ನು ತಮಗೆ ನೀಡುವಂತೆ ಕೇಳಬೇಕು, ಯಾವ ಕ್ಷೇತ್ರದಲ್ಲಿ ತಮ್ಮ ಪಕ್ಷದ ಬಲ ಹೆಚ್ಚಿದೆ ಎಂಬುದರ ಬಗ್ಗೆ ಸದ್ದಿಲ್ಲದೆ ಮಾಹಿತಿ ಸಂಗ್ರಹ ಆರಂಭಿಸಿದ್ದಾರೆ.

HD Devegowda Preparation For Loksabha Election
Author
Bengaluru, First Published Jul 19, 2018, 9:35 AM IST

ಬೆಂಗಳೂರು :  ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಜೊತೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರದ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಯಾವ ಯಾವ ಕ್ಷೇತ್ರಗಳನ್ನು ತಮಗೆ ನೀಡುವಂತೆ ಕೇಳಬೇಕು, ಯಾವ ಕ್ಷೇತ್ರದಲ್ಲಿ ತಮ್ಮ ಪಕ್ಷದ ಬಲ ಹೆಚ್ಚಿದೆ ಎಂಬುದರ ಬಗ್ಗೆ ಸದ್ದಿಲ್ಲದೆ ಮಾಹಿತಿ ಸಂಗ್ರಹ ಆರಂಭಿಸಿದ್ದಾರೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 10 ಸ್ಥಾನಗಳನ್ನು ಕಾಂಗ್ರೆಸ್ ತಮಗೆ ಬಿಟ್ಟು ಕೊಡಬೇಕು ಎಂಬ ನಿಲವನ್ನು ಗೌಡರು ಹೊಂದಿದ್ದಾರೆ. ಸಮ್ಮಿಶ್ರ ಸರ್ಕಾರದ ಸಚಿವ ಸ್ಥಾನ, ನಿಗಮ ಮಂಡಳಿಗಳಲ್ಲಿ ಮೂರನೇ ಒಂದು ಭಾಗವನ್ನೇ ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದರಿಂದ ಲೋಕಸಭಾ ಕ್ಷೇತ್ರಗಳ ಹಂಚಿಕೆ ಯಲ್ಲೂ ಇದೇ ಸೂತ್ರವನ್ನು ಮುಂದಿಡಬಹುದು ಎಂಬ ಎಣಿಕೆಯನ್ನೂ ಜೆಡಿಎಸ್ ಹೊಂದಿದೆ. 

ಹಾಗಾದಲ್ಲಿ ಈ ಪೈಕಿ ಒಂದು ಅಥವಾ ಎರಡು ಸ್ಥಾನ ಕಡಮೆಯೂ ಆಗಬಹುದು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ದೇವೇಗೌಡರು ತಮಗೆ 10 ಕ್ಷೇತ್ರಗಳು ಲಭಿಸಬಹುದು ಎಂಬ ನಿರೀಕ್ಷೆಯಲ್ಲಿಯೇ ತೆರೆಮರೆಯ ಚಟುವಟಿಕೆ ಶುರು ಮಾಡಿದ್ದು, ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿನ ಪಕ್ಷ ಹಾಗೂ ಜಾತಿವಾರು ಬಲಾಬಲ, ಸಮರ್ಥ ಅಭ್ಯರ್ಥಿಗಳು ಯಾರಿದ್ದಾರೆ ಎಂಬುದರ ಕುರಿತು ಸ್ಥಳೀಯ ಮುಖಂಡರ ಜೊತೆ ಹಂತ ಹಂತವಾಗಿ ಸಮಾಲೋಚನೆ ನಡೆಸುತ್ತಿದ್ದಾರೆ. 

ಜೊತೆಗೆ ತಮ್ಮ ನಿಷ್ಠಾವಂತರನ್ನು ಕರೆಸಿಕೊಂಡು ಮಾಹಿತಿಯನ್ನೂ ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.  ತಮಗೆ ಸಿಗುವ ಸ್ಥಾನಗಳ ಪೈಕಿ ಕಾಂಗ್ರೆಸ್ ನೆರವಿನೊಂದಿಗೆ ಹೆಚ್ಚು ಸ್ಥಾನ ಗಳಿಸಿದಲ್ಲಿ ರಾಷ್ಟ್ರ ಮಟ್ಟದಲ್ಲಿ ಮತ್ತೊಂದು ಸುತ್ತಿನ ರಾಜಕಾರಣ ಮಾಡಬಹುದು. ಕಳೆದ ಬಾರಿಯಂತೆ ಕೇವಲ 2 ಸ್ಥಾನ ಗಳಿಸಿದರೆ ರಾಷ್ಟ್ರಮಟ್ಟದಲ್ಲಿ ವರ್ಚಸ್ಸಿಗೆ ಧಕ್ಕೆ ಉಂಟಾಗಬಹುದು ಎಂಬ ಅಭಿಪ್ರಾಯಕ್ಕೆ ಗೌಡರು ಬಂದಿದ್ದಾರೆ.

ಆಷಾಢ ಮಾಸದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ನೇಮಕ ಪ್ರಕ್ರಿಯೆ ವಿಳಂಬವಾಗುತ್ತಿದೆ. ಹೀಗಾಗಿ ಈ ಪ್ರಕ್ರಿಯೆ ಮುಗಿದ ಬಳಿಕ ಕಾಂಗ್ರೆಸ್ ನಾಯಕರೊಂದಿಗೆ ಲೋಕಸಭಾ ಚುನಾವಣೆಯ ಸ್ಥಾನ ಹೊಂದಾಣಿಕೆ ಕುರಿತು ಗಂಭೀರ ಮಾತುಕತೆ ನಡೆಸುವ ಉದ್ದೇಶವನ್ನು ದೇವೇಗೌಡರು ಹೊಂದಿದ್ದಾರೆ. ಆ ಮಾತುಕತೆ ನಡೆಯುವ ಹೊತ್ತಿಗೆ ರಾಜ್ಯದ 28 ಕ್ಷೇತ್ರಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ತಯಾರಿ ಗೌಡರದ್ದು.

ವಿಧಾನಸಭಾ ಚುನಾವಣೆಯ ಲೆಕ್ಕಾಚಾರವನ್ನೇ ಮುಂದಿಟ್ಟುಕೊಂಡು ನೋಡುವುದಾದರೆ ಜೆಡಿಎಸ್‌ಗೆ ಹಳೆ ಮೈಸೂರು ಭಾಗದಲ್ಲೇ ಹೆಚ್ಚಿನ ಮತಗಳು ಲಭಿಸಿವೆ. ಹಾಗಂತ ಹಳೆ ಮೈಸೂರು ಭಾಗದಲ್ಲೇ ತಮಗೆ ಹತ್ತು ಸ್ಥಾನಗಳನ್ನು ಬಿಟ್ಟುಕೊಡುವಂತೆ ಕೇಳುವುದಕ್ಕೆ ಆಗುವುದಿಲ್ಲ. ಹಾಗೊಂದು ವೇಳೆ ಕೇಳಿದರೂ ಕಾಂಗ್ರೆಸ್ ಒಪ್ಪುವುದಿಲ್ಲ. ಹೀಗಾಗಿ, ಹಳೆ ಮೈಸೂರು ಹೊರತುಪಡಿಸಿ ಇನ್ನುಳಿದ ಭಾಗಗಳಲ್ಲಿನ ಯಾವ ಲೋಕಸಭಾ ಕ್ಷೇತ್ರ ತಮಗೆ ಅನುಕೂಲಕರ ವಾಗಿದೆ? ಕಾಂಗ್ರೆಸ್ ಬೆಂಬಲ ಪಡೆದುಕೊಂಡರೆ ಸುಲಭವಾಗಿ ಜಯ ಗಳಿಸಬಹುದು ಎಂಬುದರ ಬಗ್ಗೆ   ಗೌಡರು ಗಮನಹರಿಸಿದ್ದಾರೆ. 

ಹೀಗಾಗಿಯೇ, ಹಳೆ ಮೈಸೂರು ಹೊರತುಪಡಿಸಿ ಇತರ ಭಾಗಗಳಲ್ಲಿನ ಶಿವಮೊಗ್ಗ, ಧಾರವಾಡ, ವಿಜಯಪುರ, ಬೀದರ್, ರಾಯಚೂರು ಮತ್ತಿತರ ಕ್ಷೇತ್ರಗಳ ಮೇಲೆ ದೇವೇಗೌಡರು ಆಸಕ್ತಿ ವಹಿಸಿ ಮಾಹಿತಿ ವಿಸ್ತೃತ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಮಾಜಿ ಶಾಸಕರನ್ನು ಕಣಕ್ಕಿಳಿಸುವ ಬಗ್ಗೆಯೂ ದೇವೇಗೌಡರು ಪಟ್ಟಿ ಸಿದ್ಧಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios