ಬೆಂಗಳೂರು :  ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್‌ನ ಕೆಲವು ಅತೃಪ್ತ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ವಲಸೆ ಹೋಗುವ ಮೂಲಕ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡುವ ಪ್ರಯತ್ನಗಳು ಆರಂಭವಾದ ಬೆನ್ನಲ್ಲೇ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ತೆರೆಮರೆಯಲ್ಲಿ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ವೇಳೆ ಸಮ್ಮಿಶ್ರ ಸರ್ಕಾರ ಪತನಗೊಳ್ಳುವುದು ನಿಶ್ಚಿತವಾಗಿ ಮುಂದೆ ಯಾವ ದಾರಿಯೂ ಇಲ್ಲ ಎಂಬ ಸನ್ನಿವೇಶ ನಿರ್ಮಾಣವಾದಲ್ಲಿ ಆಗ ಮುಖ್ಯಮಂತ್ರಿ ಪಟ್ಟವನ್ನು ಕಾಂಗ್ರೆಸ್‌ ಪಕ್ಷಕ್ಕೆ ಬಿಟ್ಟುಕೊಡುವ ಮೂಲಕ ಭದ್ರಗೊಳಿಸುವ ಬಗ್ಗೆ ದೇವೇಗೌಡರು ಚಿಂತನೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹೀಗೆ ಮಾಡುವುದರಿಂದ ಸರ್ಕಾರಕ್ಕೆ ಎದುರಾಗುವ ಅಪಾಯವನ್ನೂ ನಿವಾರಿಸಿದಂತಾಗುತ್ತದೆ ಹಾಗೂ ತೆರೆಮರೆಯಲ್ಲಿ ಪರ್ಯಾಯ ಸರ್ಕಾರ ರಚಿಸುವ ಬಿಜೆಪಿ ಪ್ರಯತ್ನಕ್ಕೆ ಹಿನ್ನಡೆ ಉಂಟಾದಂತಾಗುತ್ತದೆ ಎಂಬ ಲೆಕ್ಕಾಚಾರ ದೇವೇಗೌಡರದ್ದು. ಜೊತೆಗೆ ಹಾಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮೇಲಿನ ಒತ್ತಡವೂ ಕಡಿಮೆ ಆದಂತಾಗುತ್ತದೆ. ಈ ಸಂಬಂಧ ಈಗಾಗಲೇ ಗೌಡರು ತಮ್ಮ ಆಪ್ತರೊಂದಿಗೆ ಒಂದು ಸುತ್ತಿನ ಸಮಾಲೋಚನೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ.

ಇದೆಲ್ಲವೂ ಲೋಕಸಭಾ ಚುನಾವಣೆಯ ಫಲಿತಾಂಶದ ಆಧಾರದ ಮೇಲೆಯೇ ನಿರ್ಧಾರವಾಗಲಿದೆ. ದೇವೇಗೌಡರ ಕುಟುಂಬದ ಮೂವರ ಪೈಕಿ ಯಾರು ಗೆಲ್ಲುತ್ತಾರೆ ಅಥವಾ ಸೋಲುತ್ತಾರೆ ಎಂಬ ಅಂಶವೂ ಇದರಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕಾದ ಸಂದರ್ಭ ಎದುರಾದಲ್ಲಿ ಜೆಡಿಎಸ್‌ನಿಂದ ಸಚಿವ ಎಚ್‌.ಡಿ.ರೇವಣ್ಣ ಅವರು ಉಪಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ.

ಒಟ್ಟಾರೆ, ಲೋಕಸಭಾ ಚುನಾವಣೆಯ ಫಲಿತಾಂಶ ಮತ್ತು ನಂತರ ಕಾಂಗ್ರೆಸ್‌ ಅತೃಪ್ತರು ಉರುಳಿಸುವ ದಾಳವನ್ನು ನೋಡಿಕೊಂಡು ಈ ಬಗ್ಗೆ ದೇವೇಗೌಡರು ಅಂತಿಮ ನಿರ್ಧಾರಕ್ಕೆ ಬರುವ ಸಂಭವವಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಒಂದು ವೇಳೆ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಪಟ್ಟಕೊಡುವ ನಿರ್ಧಾರ ಅಂತಿಮಗೊಂಡಲ್ಲಿ ಆ ಸ್ಥಾನದಲ್ಲಿ ಯಾರನ್ನು ಕೂರಿಸಬೇಕು ಎಂಬುದನ್ನು ದೇವೇಗೌಡರೇ ನಿರ್ಧರಿಸುವ ಹಕ್ಕು ಹೊಂದಲಿದ್ದಾರೆ. ಈ ಮೊದಲಿನ ವದಂತಿಗಳ ಪ್ರಕಾರ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸುಮ್ಮನೆ ಕುಳಿತುಕೊಳ್ಳಲಾರರು ಎಂಬ ಅನುಮಾನವಿದೆ. ಪರಿಣಾಮ, ಕಾಂಗ್ರೆಸ್‌ ಶಾಸಕರ ಅತೃಪ್ತಿ ಹಾಗೂ ಭಿನ್ನಮತ ಚಟುವಟಿಕೆಗಳು ಮತ್ತೆ ಮುಂದುವರೆಯಬಹುದು ಎಂಬ ಆತಂಕವೂ ಇದೆ.

ಹೀಗಾಗಿ, ಪರಮೇಶ್ವರ್‌ ಅವರನ್ನು ಹೊರತುಪಡಿಸಿ ಬೇರೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಸೂಚಿಸಬಹುದು. ಅದರಲ್ಲಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪ್ರಮುಖವಾಗಿವೆ. ಇಬ್ಬರಲ್ಲಿ ಯಾರು ತಮಗೆ ಸೂಕ್ತವಾಗಬಲ್ಲರು ಎಂಬುದರ ಬಗ್ಗೆ ಅಳೆದೂ ತೂಗಿ ನಿರ್ಣಯ ಕೈಗೊಳ್ಳಬಹುದು.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರೂ ಸೇರಿದಂತೆ ಅವರ ಇಬ್ಬರು ಮೊಮ್ಮಕ್ಕಳು ಗೆಲುವು ಸಾಧಿಸಿದಲ್ಲಿ ಅದರ ಯಶಸ್ಸಿನಲ್ಲಿ ಸಿದ್ದರಾಮಯ್ಯ ಅವರ ಪಾಲು ಇರುತ್ತದೆ. ಜೊತೆಗೆ ಸಿದ್ದರಾಮಯ್ಯ ಅವರೊಂದಿಗಿದ್ದ ಹಿಂದಿನ ದ್ವೇಷ, ಭಿನ್ನಾಭಿಪ್ರಾಯ ಈಗ ಬಹುತೇಕ ನಿವಾರಣೆಯಾಗಿದೆ. ಅಲ್ಲದೆ, ಹಿಂದೆ ಮುಖ್ಯಮಂತ್ರಿ ಹುದ್ದೆಗೆ ಏರುವ ಅವಕಾಶವನ್ನು ತಪ್ಪಿಸಲಾಗಿತ್ತು ಎಂಬ ಕಳಂಕವನ್ನು ತೊಡೆದುಹಾಕಿಕೊಳ್ಳಲು ಇದೊಂದು ಸದವಕಾಶವಾಗಲಿದೆ. ಮೇಲಾಗಿ ಕಾಂಗ್ರೆಸ್‌ ಶಾಸಕರಲ್ಲಿನ ಅಸಮಾಧಾನವನ್ನು ನಿಯಂತ್ರಿಸುವ ಶಕ್ತಿ ಯಾರಿಗಾದರೂ ಇದ್ದರೆ ಅದು ಸಿದ್ದರಾಮಯ್ಯ ಅವರಿಗೆ ಮಾತ್ರ ಎಂಬುದು ನಿಶ್ಚಿತವಾದಲ್ಲಿ ಆಗ ಅವರನ್ನೇ ಮುಂದಿನ ಮುಖ್ಯಮಂತ್ರಿ ಎಂದು ದೇವೇಗೌಡರು ಸೂಚಿಸುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರು ತುಂಬಾ ಅಗ್ರೆಸ್ಸಿವ್‌ ನಾಯಕರಾಗಿರುವುದರಿಂದ ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಸೂಚಿಸುವ ಬಗ್ಗೆಯೂ ಗೌಡರು ಚಿಂತನ ಮಂಥನ ನಡೆಸಿದ್ದಾರೆ. ಅದರಿಂದ ದಲಿತರೊಬ್ಬರನ್ನು ಮೊದಲ ಬಾರಿಗೆ ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ ಕೀರ್ತಿ ಗೌಡರಿಗೆ ಲಭಿಸಲಿದೆ.