ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಬಂಡಾಯ ಶಾಸಕರು ಮತ ಚಲಾಯಿಸದಂತೆ ತಂತ್ರಗಾರಿಕೆ ಹೂಡಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದು, ಹೈಕೋರ್ಟ್‌ ಮೊರೆ ಹೋಗಲು ಮುಂದಾಗಿದ್ದಾರೆ.

ಬೆಂಗಳೂರು : ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಬಂಡಾಯ ಶಾಸಕರು ಮತ ಚಲಾಯಿಸದಂತೆ ತಂತ್ರಗಾರಿಕೆ ಹೂಡಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದು, ಹೈಕೋರ್ಟ್‌ ಮೊರೆ ಹೋಗಲು ಮುಂದಾಗಿದ್ದಾರೆ.

ಒಂದೆರಡು ದಿನದಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸಾಧ್ಯತೆ ಇದೆ. ಈ ಮೂಲಕ ಕಾಂಗ್ರೆಸ್‌ ಸೇರಲು ಸಜ್ಜಾಗಿರುವ ಹಾಗೂ ಈಗಾಗಲೇ ಆಮಾನತಾಗಿರುವ ಬಂಡಾಯ ಶಾಸಕರಿಗೆ ಕಾನೂನಿನ ಮೂಲಕ ಕಟ್ಟಿಹಾಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ದೇವೇಗೌಡ ಅವರು ಅಧಿಕೃತವಾಗಿ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೆಡಿಎಸ್‌ ನ್ಯಾಯಾಲಯದ ಮೆಟ್ಟಿಲೇರಿದರೆ ಅದಕ್ಕೆ ತಿರುಗೇಟು ನೀಡಲು ಬಂಡಾಯ ಶಾಸಕರು ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಕಳೆದ 2016ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷವು ವಿಪ್‌ ಜಾರಿಗೊಳಿಸಿದರೂ ಅದನ್ನು ಉಲ್ಲಂಘಿಸಿ ಶಾಸಕರಾದ ಎನ್‌.ಚಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಜಮೀರ್‌ ಅಹ್ಮದ್‌ ಖಾನ್‌, ಎಚ್‌.ಸಿ.ಬಾಲಕೃಷ್ಣ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಇಕ್ಬಾಲ್‌ ಅನ್ಸಾರಿ, ಭೀಮಾನಾಯ್ಕ ಅವರು ಕಾಂಗ್ರೆಸ್‌ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರಿಗೆ ಅಡ್ಡಮತದಾನ ಮಾಡಿದ್ದರು. ಪಕ್ಷದ ವಿಪ್‌ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಏಳು ಬಂಡಾಯ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಭಾಧ್ಯಕ್ಷರಿಗೆ ಪತ್ರ ಬರೆಯಲಾಗಿತ್ತು. ಆದರೆ, ಈವರೆವಿಗೂ ಸಭಾಧ್ಯಕ್ಷರು ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಹೈಕೋರ್ಟ್‌ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.

ಮಾ.23ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ನ ಇಬ್ಬರು ಅಭ್ಯರ್ಥಿಗಳು ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ಜಯಗಳಿಸುವುದು ಖಚಿತ. ಆದರೆ, ಕಾಂಗ್ರೆಸ್‌ ಮೂರನೇ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಿದೆ. ಶಾಸಕರ ಕೊರತೆಯ ಮಧ್ಯೆಯೂ ಜೆಡಿಎಸ್‌ ಫಾರೂಕ್‌ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಬೆಂಬಲ ನೀಡುವಂತೆ ಕಾಂಗ್ರೆಸ್‌ಗೆ ಜೆಡಿಎಸ್‌ ಮುಖಂಡರು ಮನವಿ ಮಾಡಿದರು. ಇದಕ್ಕೆ ಕಾಂಗ್ರೆಸ್‌ ಬೆಂಬಲ ಸೂಚಿಸದ ಮೂರನೇ ಅಭ್ಯರ್ಥಿಯನ್ನು ಚುನಾವಣೆಗಿಳಿಸಿದೆ. ಇದು ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರ ತೀವ್ರ ಅಸಮಾಧಾನ ಕಾರಣವಾಗಿದೆ.

ಜೆಡಿಎಸ್‌ನ ಬಂಡಾಯ ಶಾಸಕರು ಈಗಾಗಲೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ಸಜ್ಜಾಗಿದ್ದು, ಕಾಂಗ್ರೆಸ್‌ಗೆ ಮತ ಚಲಾಯಿಸುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ರಾಜ್ಯಸಭೆ ಚುನಾವಣೆಯಲ್ಲಿ ಬಂಡಾಯ ಶಾಸಕರು ಮತ ಚಲಾಯಿಸದಂತೆ ತಡೆ ಹಾಕಲು ರಾಜಕೀಯ ಲೆಕ್ಕಾಚಾರ ಹಾಕಿರುವ ದೇವೇಗೌಡರು ಕಾನೂನು ಅಸ್ತ್ರದ ದಾಳ ಉರುಳಿಸಲು ಮುಂದಾಗಿದ್ದಾರೆ.

ಈ ನಡುವೆ ಇತ್ತೀಚೆಗೆ ಜೆಡಿಯು ಪಕ್ಷದ ನಾಯಕ ಬಿ.ಎಸ್‌.ಗೌಡ ಅವರು ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಬಂಡಾಯ ಶಾಸಕರಿಗೆ ಮತದಾನ ಹಕ್ಕು ನೀಡಬಾರದು ಎಂದು ಚುನಾವಣಾ ಆಯೋಗ ಮತ್ತು ಸಭಾಧ್ಯಕ್ಷರಿಗೆ ದೂರು ನೀಡಿದ್ದರು. ಪಕ್ಷದ ವಿಪ್‌ ಉಲ್ಲಂಘನೆ ಮಾಡಿದಾಗ ಜೆಡಿಎಸ್‌ ದೂರು ನೀಡಿತ್ತು. ದೂರು ನೀಡಿ ಒಂದು ವರ್ಷವಾದರೂ ವಿಪ್‌ ಉಲ್ಲಂಘನೆ ಮಾಡಿದ ಸದಸ್ಯರ ವಿರುದ್ಧ ವಿಧಾನಸಭಾಧ್ಯಕ್ಷರು ಯಾವುದೇ ಕ್ರಮ ಕೈಗೊಂಡಿಲ್ಲ. ಜೆಡಿಎಸ್‌ನಿಂದ ಏಳು ಶಾಸಕರನ್ನು ಅಮಾನತು ಮಾಡಲಾಗಿದೆ. ಹೀಗಾಗಿ ಅವರು ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಮೂರು ತಿಂಗಳೊಳಗೆ ಇಂತಹ ವಿಷಯವನ್ನು ಇತ್ಯರ್ಥಗೊಳಿಸಬೇಕು. ಆದರೆ, ಸಭಾಧ್ಯಕ್ಷರು ಈವರೆಗೆ ಯಾವುದೇ ಕ್ರಮ ಗೊಂಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.