ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಣ ಮತ್ತು ಧಿಮಾಕಿಗೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಲಿ ದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಣ ಮತ್ತು ಧಿಮಾಕಿಗೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಲಿ ದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಅರಸೀಕೆರೆಯ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇವೇಗೌಡರು ಒಂದೂವರೆ ವರ್ಷ ಪ್ರಧಾನಿಯಾಗಿ, ಕುಮಾರಸ್ವಾಮಿ 20 ತಿಂಗಳು ಸಿಎಂ ಆಗಿ ವಿಕಾಸ ಮಾಡಲಿಲ್ಲವೇ?’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿರುವ ಬಗ್ಗೆ ತಿರುಗೇಟು ನೀಡಿದರು.
‘ಅಧಿಕಾರ ಎಂದಿಗೂ ಶಾಶ್ವತವಿಲ್ಲ. ವಿಧಾನಸೌಧದ 3ನೇ ಮಹಡಿಯಲ್ಲಿ ಎಂತೆಂಥ ದಾರ್ಶನಿಕರು, ಮಹನೀಯರು ಕುಳಿತಿದ್ದರು ಎಂಬುದನ್ನು ಮೆಲುಕು ಹಾಕಿಕೊಂಡು ಸಿದ್ದರಾಮಯ್ಯ ಆಡಳಿತ ನಡೆಸಬೇಕು. ಮಾತಿನ ಮೇಲೆ ಹಿಡಿತ ಇರಬೇಕು. ನಾನು ಸಾಕಷ್ಟು ತಡೆದುಕೊಂಡಿದ್ದೇನೆ.
ತುಟಿ ಮೀರಿದ ಮಾತುಗಳನ್ನಾಡಿದರೇ ಜನ ಸುಮ್ಮನಿರಲ್ಲ. ನಾನು ಒಂದೂವರೆ ವರ್ಷ ಏನು ಮಾಡಿದ್ದೇನೆ ಎಂಬುದನ್ನು ನೆನಪಿಸಿಕೊಳ್ಳಲಿ. ಬೆಂಗಳೂರಿನ ಐಟಿ, ಬಿಟಿ, ಕೈಗಾರಿಗೆ ಅಭಿವೃದ್ಧಿಗೆ ಬುನಾದಿ ಹಾಕಿದ್ದು, ಶಕ್ತಿ ತುಂಬಿದ್ದು ಯಾರು? ಇದನ್ನರಿಯದೆ ವ್ಯಂಗ್ಯವಾಗಿ ಮಾತನಾಡಲು ಅವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಕಿಡಿಕಾರಿದರು.
ನನ್ನನ್ನು ಕೆಣಕೋದು ಬೇಡ: ನಾನು ಶಂಕುಸ್ಥಾಪನೆ ಮಾಡಿದ ಕೃಷ್ಣಾ ಯೋಜನೆಯಡಿ ಸಿಗುವ ನೀರನ್ನು ಇನ್ನೂ ಏಕೆ ಸಮರ್ಪವಾಗಿ ಬಳಸಿಕೊಳ್ಳಲು ಆಗಿಲ್ಲ. ಇಂಥವರಿಗೆ ಜೆಡಿಎಸ್‌ನ ವಿಕಾಸ ಯಾತ್ರೆ, ನನ್ನ ಸಾಧನೆ ಬಗ್ಗೆ ಮಾತನಾಡಲು ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ನಾನು ಈವರೆಗೂ ಯಡಿಯೂರಪ್ಪ ಅವರ ಬಗೆಗಾಗಲಿ, ಸಿದ್ದರಾಮಯ್ಯ ಅವರ ಬಗ್ಗೆಯಾಗಲಿ ಅಗೌರವದಿಂದ ಮಾತನಾಡಿಲ್ಲ.
ಮೌನ, ತಾಳ್ಮೆ ದೌರ್ಬಲ್ಯದ ಸಂಕೇತವಲ್ಲ. ಸಿಎಂ ಸಿದ್ದರಾಮಯ್ಯ ನನ್ನನ್ನು ಕೆಣಕೋದು ಬೇಡ ಎಂದರು. ಇದೇ ವೇಳೆ, ದಿನಕ್ಕೊಂದು ಭಾಗ್ಯದ ಮೂಲಕ ನೀವು ಏನೆಲ್ಲಾ ವಿಕಾಸ ಮಾಡಿದ್ದೀರಿ, ಯಾವ ಸ್ವಾಮೀಜಿಗೆ ಏನು ನೀಡಿದ್ದೀರಿ ಎಂಬುದು ಗೊತ್ತಿದೆ ಎಂದು ತಿಳಿಸಿದರು.
