ಬೆಂಗಳೂರು[ಜು.15]: ರೇವಣ್ಣ ಅವರ ವಾಮಾಚಾರಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನು ಬಲಿ ಕೊಡಲಾಗಿದ್ದು, ಸೋಮವಾರ ಕುಮಾರಸ್ವಾಮಿ ಅವರನ್ನು ಕೂಡ ಬಲಿ ಕೊಡಲಾಗುತ್ತಿದೆ. ಸೋಮವಾರ ಸಮ್ಮಿಶ್ರ ಸರ್ಕಾರದ ಅಂತ್ಯ ಆಗಲಿದ್ದು, ಶ್ರದ್ಧಾಂಜಲಿ ಅರ್ಪಿಸುತ್ತೇವೆ ಎಂದು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.

ಯಲಹಂಕದ ರಮಡ ರೆಸಾರ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಶಾಸಕರ ಸಂಖ್ಯೆ ಈಗ 99ಕ್ಕೆ ಕುಸಿದಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಭಂಡ ಧೈರ್ಯ ಮಾಡುತ್ತಿದ್ದಾರೆ. ವಿಶ್ವಾಸ ಮತಯಾಚಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ. ಕುಮಾರಸ್ವಾಮಿ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದರೆ ಗೌರವ ಉಳಿಯಲಿದೆ. ಇಲ್ಲದಿದ್ದರೆ ಜನರು ನಿಮ್ಮ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದು ಎಚ್ಚರಿಸಿದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಖ್ಯಮಂತ್ರಿಗಳು ಗಾಳಿಯಲ್ಲಿ ಗುಂಡು ಹಾರಿಸಿದರೆ, ಸಹೋದರ ಎಚ್‌.ಡಿ.ರೇವಣ್ಣ ಅವರು ವಾಮಾಚಾರ ನಡೆಸುತ್ತಾರೆ. ಜನರಿಗಾಗಿ ಇವರು ದೇವರ ಮೊರೆ ಹೋಗಲ್ಲ. ತಮ್ಮ ಸ್ವಾರ್ಥಕ್ಕಾಗಿ ವಾಮಾಚಾರ ಮಾಡುತ್ತಾರೆ ಎಂದು ಟೀಕಿಸಿದರು.

ರಾಜೀನಾಮೆ ಸಲ್ಲಿಸಿರುವ ಶಾಸಕರು ಸ್ವಯಂಪ್ರೇರಿತವಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ರಾಜೀನಾಮೆ ನೀಡಿದ್ದೇವೆ ಎಂದು ಸ್ಪೀಕರ್‌ ಅವರಿಗೆ ನೀಡಿರುವ ಪತ್ರದಲ್ಲಿ ಹಾಗೂ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಇಷ್ಟಾದರೂ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಶಾಸಕರ ರಾಜೀನಾಮೆಯನ್ನು ಅಂಗೀಕರಿಸದೆ ವಿಳಂಬ ಧೋರಣೆ ಅನುಸರಿಸುವುದು ಸರಿಯಲ್ಲ. ಸ್ಪೀಕರ್‌ ಅವರ ಬಗ್ಗೆ ಅಪಾರ ಗೌರವವಿದೆ. ಈ ಹಿಂದೆ ರಮೇಶ್‌ ಕುಮಾರ್‌ ಅವರು ಸ್ಪೀಕರ್‌ ಘನತೆಯನ್ನು ಎತ್ತಿಹಿಡಿದಿದ್ದಾರೆ. ಈಗಲೂ ಕೂಡ ಸ್ಪೀಕರ್‌ ಅವರು ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯಬಾರದು. ಶಾಸಕರ ರಾಜೀನಾಮೆ ಪತ್ರ ಅಂಗೀಕರಿಸಿದರೆ ಎಲ್ಲ ಗೊಂದಲಗಳು ತನ್ನಿಂದ ತಾನೇ ಬಗೆಹರಿಯುತ್ತವೆ ಎಂದರು.