ನಾರಿಮನ್‌ ವಿರುದ್ಧ ಅರ್ಜಿ ಸಲ್ಲಿಸಿದ್ದವರಿಗೆ ರೂ.1ಲಕ್ಷ ದಂಡ | ಅನಗತ್ಯ ವ್ಯಾಜ್ಯ ಸ್ವರೂಪದ ಅರ್ಜಿ ಎಂದ ಕೋರ್ಟ್‌

ಬೆಂಗಳೂರು (ಅ.08): ಕಾವೇರಿ ವಿಚಾರವಾಗಿ ಕರ್ನಾಟಕ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿ​ರುವ ಹಿರಿಯ ವಕೀಲ ಫಾಲಿ ಎಸ್‌. ನಾರಿಮನ್‌ ವಿರುದ್ಧ ಭಾರತೀಯ ವಕೀಲರ ಪರಿಷತ್‌ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಕೀಲ ಎ.ವಿ.ಅಮರನಾಥ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್‌, ರೂ.1 ಲಕ್ಷ ದಂಡ ವಿಧಿಸಿದೆ.

ನಾರಿಮನ್‌ ಅವರ ಪುತ್ರ ಸುಪ್ರಿಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿದ್ದಾರೆ. ಇದೇ ಕೋರ್ಟ್‌ನಲ್ಲಿ ನಾರಿಮನ್‌ ಅವರೂ ವಾದ ಮಂಡಿಸುತ್ತಿದ್ದಾರೆ. ಇದು ಭಾರತೀಯ ವಕೀಲರ ಪರಿಷತ್‌ ನಿಯಮ 1 (6)ಕ್ಕೆ ವಿರುದ್ಧವಾಗಿದೆ. ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿರುವ ಕೋರ್ಟ್‌ನಲ್ಲಿ ಅವರ ಹತ್ತಿರದ ಸಂಬಂಧಿಕರು ವಾದ ಮಂಡಿಸಬಾರದು ಎಂಬ ನಿಯಮವನ್ನು ನಾರಿಮನ್‌ ಉಲ್ಲಂಘಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪರಿಷತ್‌ಗೆ ನಿರ್ದೇಶಿಸಬೇಕು' ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಆದರೆ, ಅರ್ಜಿದಾರ ಎ.ವಿ.ಅಮರನಾಥ್‌ ಅವರ ಈ ಅರ್ಜಿ ಅನಗತ್ಯ ವ್ಯಾಜ್ಯ ಸ್ವರೂಪ ಹಾಗೂ ತಪ್ಪುಗ್ರಹಿಕೆಯಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್‌ ಅವರಿದ್ದ ವಿಭಾಗೀಯ ಪೀಠವು ಅರ್ಜಿದಾರರಿಗೆ ದಂಡ ವಿಧಿಸಿ ಆದೇಶಿಸಿತು. ಅಂತೆಯೇ, ಈ ದಂಡದ ಮೊತ್ತವನ್ನು ಒಂದು ತಿಂಗಳ ಅವಧಿಯಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು. ನಿಗದಿತ ಅವಧಿಯಲ್ಲಿ ಹಣ ಪಾವತಿಸದಿದ್ದರೆ, ಪ್ರಾಧಿಕಾರವೇ ದಂಡವನ್ನು ವಸೂಲಿ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.