ರಾಜಕಾಲುವೆ ಒತ್ತುವರಿ ಆರೋಪ | ನಾಳೆ ಸರ್ವೆ ನಡೆಸಲಿರುವ ಪಾಲಿಕೆ

ಬೆಂಗಳೂರು (ಫೆ.06): ಜೆ.ಸಿ.ನಗರದ ಮಠದ ಹಳ್ಳಿಯ ಬಳಿ ರಾಜಕಾಲುವೆ ಒತ್ತುವರಿ ಆರೋಪ ಎದುರಿಸುತ್ತಿರುವ ವೈಟ್‌ಹೌಸ್‌ ಅಪಾರ್ಟ್‌ಮೆಂಟ್‌ ಪ್ರಕರಣ ಸಂಬಂಧ ವಾರದೊಳಘೆ ಸರ್ವೆ ನಡೆಸಿ ಕ್ರಮಕೈಗೊಳ್ಳುವಂತೆ ಹೈಕೋರ್ಟ್‌ ಆದೇಶಿಸಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಮರುಸರ್ವೆಗೆ ಸಿದ್ಧತೆ ನಡೆಸಿದೆ.

ವೈಟ್‌ಹೌಸ್‌ ಅಪಾರ್ಟ್‌ಮೆಂಟ್‌ ಒತ್ತುವರಿ ಸಂಬಂಧ ಫೆ.2ರಂದು ಹೈಕೋರ್ಟ್‌ ಆದೇಶ ಹೊರಡಿಸಿದ್ದು, ವಾರದೊಳಗೆ ಮರುಸರ್ವೆ ನಡೆಸಿ, ಕ್ರಮ​ಕೈಗೊಳ್ಳುವಂತೆ ಪಾಲಿಕೆಗೆ ಸೂಚನೆ ನೀಡಿದೆ. ಈ ಹಿನ್ನೆ​ಲೆಯಲ್ಲಿ ಬೃಹತ್‌ ಮಳೆನೀರುಗಾಲುವೆ ವಿಭಾ​ಗದ ಮುಖ್ಯ ಎಂಜಿನಿಯರ್‌, ಕಂದಾಯ ಇಲಾ​ಖೆಯ ಭೂ ದಾಖಲೆಗಳ ಜಂಟಿ ಆಯುಕ್ತರಿಗೆ ಪತ್ರ ಬರೆದು ಮರುಸರ್ವೆ ನಡೆಸುವಂತೆ ಕೋರಿದ್ದಾರೆ.

ಅದರಂತೆ ಸೋಮವಾರ ಅಪಾರ್ಟ್‌ಮೆಂಟ್‌ ಸರ್ವೆ ನಡೆಯಲಿದ್ದು, ಒತ್ತುವರಿಯಾಗಿರುವುದು ಸಾಬೀತಾದರೆ ಕೂಡಲೇ ತೆರವು ಕಾರ್ಯಾಚರಣೆ ನಡೆಸಲಾಗುವುದು. ಒಂದೊಮ್ಮೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗದಿದ್ದರೆ ಅದು ನ್ಯಾಯಾಂಗ ನಿಂದನೆಯಾಗಲಿದೆ. ಹೀಗಾಗಿ ಸೋಮವಾರ ಮರುಸರ್ವೆ ನಡೆಸಿ ಕೂಡಲೇ ಕಟ್ಟಡ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆಯ ಬೃಹತ್‌ ಮಳೆ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಸಿದ್ದೇಗೌಡ ತಿಳಿಸಿದ್ದಾರೆ.
ಈ ಹಿಂದೆ ಅಪಾರ್ಟ್‌ಮೆಂಟ್‌ ಒತ್ತುವರಿಯಾಗಿ ರುವ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದರು. ಈ ವೇಳೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಹಾಗೂ ಸ್ಥಳೀಯ ಶಾಸಕ ವೈ.ನಾರಾಯಣಸ್ವಾಮಿ ಒತ್ತುವರಿ ತೆರವು ಕಾರ್ಯಾ​ಚರಣೆ ನಡೆಸದಂತೆ ಬಿಬಿಎಂಪಿ ಅಧಿಕಾರಿ​ಗಳನ್ನು ತಡೆದಿದ್ದರು. ಜತೆಗೆ ಪಾಲಿಕೆಯ ಕ್ರಮವನ್ನು ಖಂಡಿಸಿ ಹೈಕೋರ್ಟ್‌ ಮೊರೆಹೋಗಿದ್ದರು.