ಮೂಲತಃ ಬಿಜೆಪಿಯವರೇ ಆಗಿರುವ ಕಾರಣಕ್ಕೆ ಬಾಲಕೃಷ್ಣ ಅವರ ಸೇರ್ಪಡೆಗೆ ಪಕ್ಷದೊಳಗೆ ಸಹಮತ ಇದ್ದೇ ಇರುತ್ತದೆ. ಆದರೆ, ಮಾಗಡಿಯಲ್ಲಿ ಬಿಜೆಪಿಯ ಬಲ ಕಡಿಮೆ ಇರುವುದರಿಂದ ಬಾಲಕೃಷ್ಣ ಅವರೇ ತಮ್ಮ ಮಾತೃ ಪಕ್ಷಕ್ಕೆ ಮರಳಿ ಹೋಗಲು ಹಿಂದೆಮುಂದೆ ನೋಡುತ್ತಿದ್ದಾರೆನ್ನಲಾಗಿದೆ.
ಬೆಂಗಳೂರು(ಏ. 19): ಜೆಡಿಎಸ್ ಬಂಡಾಯ ಶಾಸಕರಿಗೆ ಅತಂತ್ರತೆಯ ಭೀತಿ ಆವರಿಸಿದೆಯಾ? ಇಂಥದ್ದೊಂದು ಅನುಮಾನಕ್ಕೆ ಕಾರಣವಾಗಿದ್ದು ಜೆಡಿಎಸ್ ಬಂಡಾಯ ಶಾಸಕ ಹೆಚ್.ಸಿ.ಬಾಲಕೃಷ್ಣ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಡುವಿನ ಭೇಟಿ. ಜೆಡಿಎಸ್'ನ ಎಲ್ಲಾ ಏಳು ಬಂಡಾಯ ಶಾಸಕರು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ ಎಂಬ ಸ್ಥಿತಿಯಲ್ಲಿದ್ದಾಗ ಬಾಲಕೃಷ್ಣನವರ ಬಿಎಸ್'ವೈ ಭೇಟಿಯು ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಬಾಲಕೃಷ್ಣ ಯೂಟರ್ನ್ ತೆಗೆದುಕೊಂಡು ಮತ್ತೆ ಬಿಜೆಪಿಗೆ ಸೇರ್ಪಡೆಗೊಳ್ಳಬಹುದು ಎಂಬ ಮಾತಂತೂ ದಟ್ಟವಾಗಿ ಹರಿದಾಡುತ್ತಿದೆ.
ಬಿಜೆಪಿ ಸೇರುತ್ತಾರಾ ಬಾಲಕೃಷ್ಣ?
ಮೂಲತಃ ಬಿಜೆಪಿಯವರೇ ಆದ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಇತರ 6 ಶಾಸಕರೊಂದಿಗೆ ಬಹಳ ಖುಷಿಯಿಂದಲೇ ಕಾಂಗ್ರೆಸ್ ಸೇರ್ಪಡೆಗೊಳ್ಳಲು ಮುಂದಾಗಿದ್ದಂತೂ ಹೌದು. ಆದರೆ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿಯಾಗುವ ಸಾಧ್ಯತೆ ಕಾಣುತ್ತಿದ್ದಂತೆಯೇ ಬಾಲಕೃಷ್ಣ ಮನಸ್ಸು ಬದಲಾಯಿಸಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಇಂಬು ಕೊಡುವಂತೆ, ನಿನ್ನೆ ಜೆಡಿಎಸ್ ಬಂಡಾಯ ಶಾಸಕರ ಜೊತೆ ಕಾಂಗ್ರೆಸ್ ವರಿಷ್ಠ ದಿಗ್ವಿಜಯ್ ಸಿಂಗ್ ಮತ್ತು ಸಿಎಂ ಸಿದ್ದರಾಮಯ್ಯ ನಡೆಸಿದ ಮಾತುಕತೆ ಸಭೆಯಲ್ಲಿ ಬಾಲಕೃಷ್ಣ ಗೈರಾಗಿದ್ದದ್ದು ಗಮನಾರ್ಹ.
ಮೂಲತಃ ಬಿಜೆಪಿಯವರೇ ಆಗಿರುವ ಕಾರಣಕ್ಕೆ ಬಾಲಕೃಷ್ಣ ಅವರ ಸೇರ್ಪಡೆಗೆ ಪಕ್ಷದೊಳಗೆ ಸಹಮತ ಇದ್ದೇ ಇರುತ್ತದೆ. ಆದರೆ, ಮಾಗಡಿಯಲ್ಲಿ ಬಿಜೆಪಿಯ ಬಲ ಕಡಿಮೆ ಇರುವುದರಿಂದ ಬಾಲಕೃಷ್ಣ ಅವರೇ ತಮ್ಮ ಮಾತೃ ಪಕ್ಷಕ್ಕೆ ಮರಳಿ ಹೋಗಲು ಹಿಂದೆಮುಂದೆ ನೋಡುತ್ತಿದ್ದಾರೆನ್ನಲಾಗಿದೆ.
ಬಾಲಕೃಷ್ಣ ರಿಯಾಕ್ಷನ್:
ಬಿಜೆಪಿ ಸೇರ್ಪಡೆ ವಿಚಾರವನ್ನು ಶಾಸಕ ಬಾಲಕೃಷ್ಣ ತಳ್ಳಿಹಾಕಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಮಾಗಡಿ ಜೆಡಿಎಸ್ ಶಾಸಕರು, ತಾವು ಮಂದಿ ಕಾಂಗ್ರೆಸ್ ಸೇರುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ. "ಸಿದ್ದಗಂಗಾಸ್ವಾಮಿ ಜನ್ಮಸ್ಥಳ ನನ್ನ ಕ್ಷೇತ್ರದಲ್ಲಿ ಬರುತ್ತದೆ. ಅಲ್ಲಿ ಕಾರ್ಯಕ್ರಮವೊಂದನ್ನು ನಡೆಸುವ ಕುರಿತು ಯಡಿಯೂರಪ್ಪನವರ ಜೊತೆ ಚರ್ಚೆ ನಡೆಸಲಷ್ಟೇ ನಾನು ಭೇಟಿಯಾಗಿದ್ದು," ಎಂದು ಹೆಚ್.ಸಿ.ಬಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸೇರಲು ಯಾಕೆ ವಿಳಂಬ ಮಾಡುತ್ತಿದ್ದೀರಿ ಎಂದು ಕೇಳಿದ ಪ್ರಶ್ನೆಗೆ, "ಸದ್ಯಕ್ಕೆ ಕಾಂಗ್ರೆಸ್ ಸೇರಲು ಕೆಲ ತಾಂತ್ರಿಕ ಅಡೆತಡೆಗಳಿವೆ" ಎಂದು ಬಾಲಕೃಷ್ಣ ಸ್ಪಷ್ಟೀಕರಣ ನೀಡಿದ್ದಾರೆ.
