ಕರ್ನಾಟಕದ ರೈತರು ಮತ್ತು ಸರ್ಕಾರದ ಮೂರು ದಶಕಗಳ ಮಹದಾಯಿ ಹೋರಾಟಕ್ಕೆ ನ್ಯಾಯಾಧಿಕರಣ ಕಳೆದ ತಿಂಗಳು ತನ್ನ ತೀರ್ಪು ಪ್ರಕಟಿಸಿದೆ. ತೀರ್ಪಿನ ಸಾರ ಅರ್ಥವಾಗದವರು ಸ್ವಾಗತಿಸಿ, ಸಂಭ್ರಮಿಸಿದರೆ, ಅರ್ಥ ಮಾಡಿಕೊಂಡವರು ನ್ಯಾಯಾಧಿಕರಣದ ನಡೆಯನ್ನು ಖಂಡಿಸಿದ್ದಾರೆ. ಮೇಲ್ಮನವಿ ಸಲ್ಲಿಸಿ ಎಂದು ಒತ್ತಾಯಿಸಿದ್ದಾರೆ.

ಸರ್ಕಾರ ಕೂಡ ತಜ್ಞರ ಜತೆ ಸಮಾಲೋಚಿಸಿ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿತ್ತು. ಆದರೆ ತೀರ್ಪು ಪ್ರಕಟವಾಗಿ ತಿಂಗಳು ಸಮೀಪಿ ಸುತ್ತ ಬಂದಿದ್ದರೂ ಸಮ್ಮಿಶ್ರ ಸರ್ಕಾರ ಆಚೀಚೆ ಅಲುಗಾಡಿಲ್ಲ. ಪ್ರತಿಪಕ್ಷ ಬಿಜೆಪಿ ಕೂಡ ಬಾಯಿ ಬಿಡದಿರುವುದು ಮಲಪ್ರಭಾ ಅಚ್ಚು ಕಟ್ಟು ಪ್ರದೇಶದ ರೈತರನ್ನು ಮುಂದೇನು ಎನ್ನುವ ಪ್ರಶ್ನೆ ಕಾಡುವಂತೆ ಮಾಡಿದೆ. ಜತೆಗೆ ಸರ್ಕಾರ ಈಗಲೇ ಮಹದಾಯಿ ಕುರಿತು ಉತ್ಸಾಹ ಕಳೆದುಕೊಂಡಿತೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈವರೆಗೆ ಅಂತಾರಾಜ್ಯ ನೀರಿನ ವಿವಾದಗಳ ಸಂದರ್ಭದಲ್ಲಿ ಸರ್ಕಾರಗಳು ತೀರ್ಪು ಪ್ರಕಟವಾದ ವಾರೊಪ್ಪತ್ತಿನಲ್ಲಿ ತಜ್ಞರು, ಸರ್ವ ಪಕ್ಷಗಳ ಮುಖಂಡರ ಜತೆ ಸಮಾಲೋಚಿಸಿ ಮೇಲ್ಮನವಿ ಸಲ್ಲಿಸುತ್ತ ಬಂದಿವೆ. ಮಹದಾಯಿ ವಿಷಯದಲ್ಲೂ ಜನತೆಯ ನಿರೀಕ್ಷೆ ಅದೇ ಆಗಿತ್ತು. ಆದರೆ, ಕುಮಾರಸ್ವಾಮಿ ನೇತೃತ್ವದ ಸರ್ಕಾರದಿಂದ ಕನಿಷ್ಠ ಪಕ್ಷ ತಜ್ಞರ ಸಭೆಯನ್ನೂ ಕರೆಯುವ, ಸರ್ವಪಕ್ಷ ಮುಖಂಡರ ಸಲಹೆ ಕೇಳುವ ಕೆಲಸ ಕೂಡ ಆಗಿಲ್ಲ.

ತಕ್ಷಣದ 2 ಪರಿಹಾರ ಏನು?
ತಕ್ಷಣಕ್ಕೆ ಈ ಸಮಸ್ಯೆಗೆ ರಾಜ್ಯ ಸರ್ಕಾರದ ಬಳಿ ಎರಡು ಪರಿಹಾರಾತ್ಮಕ ಉತ್ತರಗಳಿವೆ. ಅವು, ಮಹದಾಯಿ ನ್ಯಾಯಾಧಿಕರಣದ ತೀರ್ಪಿನಲ್ಲಿ ಸದ್ಯ ದಕ್ಕಿರುವ 13.5 ಟಿಎಂಸಿ ನೀರನ್ನು ಶೀಘ್ರಗತಿಯಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದು ಮತ್ತು ನ್ಯಾಯಯುತವಾಗಿ ನಮಗೆ ಮಹದಾಯಿಯಲ್ಲಿ ಸಿಗಬೇಕಿರುವ ಹಕ್ಕಿನ ನೀರನ್ನು ಪಡೆಯಲು ಕಾನೂನು ಹೋರಾಟ ಮುಂದುವರೆಸುವುದು. ಆದರೆ ಹೇಳಿದಷ್ಟು ಸರಳವಾಗಿ ವಾಸ್ತವ ಪರಿಸ್ಥಿತಿ ಇಲ್ಲ. ದಕ್ಕಿರುವ ನೀರನ್ನು ಸದ್ಬಳಕೆ ಮಾಡುವುದು ಮತ್ತು ನ್ಯಾಯಾಲಯದಲ್ಲಿ ಹೋರಾಟ ಮಾಡುವುದು ಸಣ್ಣ ಸಂಗತಿಗಳೇನಲ್ಲ. ರಾಜ್ಯದಲ್ಲಿ ಈಗಾಗಲೇ ಚಾಲನೆಯಲ್ಲಿರುವ ನೀರಾವರಿ ಯೋಜನೆಗಳ ಸ್ಥಿತಿಗತಿ ಮತ್ತು ಗತಿಸಿರುವ ಸಮಯ, ಹಣ ಲೆಕ್ಕ ಹಾಕಿದರೆ ಗಾಬರಿಯಾಗುತ್ತದೆ. ಇನ್ನು ಕಾನೂನು ಹೋರಾಟ ಮುಗಿಯದ ಕಥೆ. ಮುಗಿಲು ಅಳೆದಂತೆ ದಿನ, ವರ್ಷಗಳು ಉರುಳುತ್ತಲೇ ಇರುತ್ತವೆ. ಜತೆಗೆ ಹೊಸ ತಗಾದೆಗಳು ಹುಟ್ಟಿಕೊಂಡು ಪ್ರಕರಣವನ್ನು ಇನ್ನಷ್ಟು ಗೋಜಲು ಮಾಡಿ ಸಾಕಪ್ಪ ಈ ನ್ಯಾಯ ಎನ್ನುವ ನಿರುತ್ಸಾಹ ಹುಟ್ಟಿಸುವುದು ಸುಳ್ಳಲ್ಲ. 

ನ್ಯಾಯ ಸಿಕ್ಕಿದ್ದು ಯಾರಿಗೆ?
ಅಚ್ಚರಿಯೆಂದರೆ ಕರ್ನಾಟಕ ಸರ್ಕಾರದಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಕೂಡ ಈ ತೀರ್ಪನ್ನು ಸ್ವಾಗತಿಸಿದ್ದಾರೆ. ಹಾಗಿದ್ದರೆ ಮಹದಾಯಿ ಹೋರಾಟದಲ್ಲಿ ನ್ಯಾಯ ಸಿಕ್ಕಿದ್ದು ಯಾರಿಗೆ? ತೀರ್ಪು ನೀಡಿದ ನ್ಯಾ.ಪಾಂಚಾಲ್ ಅವರ ವರದಿಯನ್ನು ತಡಕಾಡಿದರೆ ತಾನು ಸಮೀಕ್ಷೆ ಮಾಡಿದ 188.6 ಟಿಎಂಸಿ ನೀರಿನ ಲೆಕ್ಕಾಚಾರಕ್ಕೆ ಬದ್ಧವಾದ ನ್ಯಾಯಾಧಿಕರಣ ಅದರಲ್ಲೇ ಮೂರೂ ರಾಜ್ಯಗಳಿಗೆ 39 ಟಿಎಂಸಿ ಹಂಚಿ, ಉಳಿಕೆ 149 ಟಿಎಂಸಿ ಬಗ್ಗೆ ಚಕಾರವೆತ್ತಿಲ್ಲ. ಇದು ತೀರ್ಪು ಎನ್ನುವುದಕ್ಕಿಂತ ಆಯಾ ರಾಜ್ಯಗಳು ಮಹದಾಯಿ ನೀರಿನಲ್ಲಿ ತಕ್ಷಣಕ್ಕೆ ಕೈಗೆತ್ತಿಕೊಳ್ಳಲು ಬೇಡಿಕೆ ಇಟ್ಟಿದ್ದ ಯೋಜನೆಗಳಿಗೆ ನೀಡಿರುವ ಅನುಮತಿಯಂತಿದೆ. ಈ ವಿವರವನ್ನು ಕೇಳಿಯೂ ಕರ್ನಾಟಕದ ಜನತೆ ತೀರ್ಪನ್ನು ಒಪ್ಪಿಕೊಳ್ಳಬೇಕೆ? ಗೋವಾ, ಮಹಾರಾಷ್ಟ್ರಗಳಿಗೆ ಹೋರಾಟದ ಯಾವುದೇ ದರ್ದು ಇಲ್ಲ. ಕಾರಣ ಮಹದಾಯಿ ನೀರಿನಿಂದ ಆ ರಾಜ್ಯಗಳಿಗೆ ಆಗಬೇಕಿರುವುದು ಏನೂ ಇಲ್ಲ. ಈ ನೀರು ಬೇಕಿರುವುದು ಕರ್ನಾಟಕಕ್ಕೆ. ಕಾರಣ, ಸತತ ಬರಗಾಲದಿಂದ ಒಣಗುವ ಭೂಮಿಗೆ ಹರಿಸಲು, ಜನತೆ ಮತ್ತು ಜಾನುವಾರುಗಳ ಆರಿದ ಗಂಟಲಿಗೆ ಹನಿಸಲು ಅಪಾರ ಪ್ರಮಾಣದ ಈ ನೀರು ಬೇಕಿದೆ. ಹಾಗಾಗಿ ಕರ್ನಾಟಕ ಮಹದಾಯಿ ನೀರಿನ ಹಕ್ಕಿನ ಹೋರಾಟ ಮರೆತರೆ, ತನ್ನ ಮುಂದಿನ ಪೀಳಿಗೆಗೆ ನಿಜಕ್ಕೂ ಅನ್ಯಾಯ ಮಾಡಿದಂತಾಗಲಿದೆ.

ನೀರು ಸಂಗ್ರಹಿಸುವುದು ಎಲ್ಲಿ?
ಈಗ ಬಳಕೆಗೆ ಅನುಮತಿ ಲಭಿಸಿರುವ 13.5 ಟಿಎಂಸಿ ನೀರನ್ನು ಮಹದಾಯಿಯ ಕಳಸಾ, ಬಂಡೂರಾ, ಚೋರ್ಲಾ, ಸಿಂಗಾರಾ, ವಾಟಿ, ಹಳತಾರ ಮುಂತಾದ ಝರಿ ರೂಪದ ಹಳ್ಳಗಳನ್ನು ಮಲಪ್ರಭಾ ಉಗಮ ಸ್ಥಾನಕ್ಕೆ ಹರಿಸಿ ನದಿ ಮೂಲಕ ಅಲ್ಲಿಂದ ಸವದತ್ತಿ ಬಳಿಯ ರೇಣುಕಾ ಸಾಗರದಲ್ಲಿ ಸಂಗ್ರಹಿಸಬೇಕು. ಈ ನೀರು ಬಳಕೆಗೆ ಈಗ ನಮ್ಮ ಮುಂದೆ ಇರುವುದು ಇದೊಂದೇ ಮಾರ್ಗ. ಆದರೆ, ಇಷ್ಟೊಂದು ಪ್ರಮಾಣದ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈ ಅಣೆಕಟ್ಟೆಗಿದೆಯೇ ಎನ್ನುವ ಮತ್ತೊಂದು ಪ್ರಶ್ನೆ ಹುಟ್ಟಿಕೊಂಡಿದೆ.

ಸತತ ಬರಗಾಲಕ್ಕೆ ತುತ್ತಾಗುತ್ತಿದ್ದ ಗದಗ ಜಿಲ್ಲೆಯ ನರಗುಂದ, ರೋಣ, ಧಾರವಾಡ ಜಿಲ್ಲೆಯ ನವಲಗುಂದ, ಬೆಳಗಾವಿ ಜಿಲ್ಲೆಯ ಸವದತ್ತಿ, ಬೈಲಹೊಂಗಲ, ಬಾಗಲಕೋಟೆಯ ಬಾದಾಮಿ ತಾಲೂಕುಗಳಿಗೆ ನೀರಾವರಿಯ ಅಗತ್ಯತೆ ಮತ್ತು ಈ ಭಾಗದ ಕುಡಿಯುವ ನೀರಿನ ಅಭಾವ ನೀಗಿಸಲೆಂದು ರೂಪಗೊಂಡದ್ದು ‘ಮಲಪ್ರಭಾ ನೀರಾವರಿ ಯೋಜನೆ.’ ಸವದತ್ತಿ ಹತ್ತಿರ ನವಿಲುತೀರ್ಥ ಬಳಿ ಮಲಪ್ರಭಾ ನದಿಗೆ ಅಣೆಕಟ್ಟೆ ನಿರ್ಮಿಸಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ 5.27 ಲಕ್ಷ ಎಕರೆ ಭೂಮಿಗೆ ನೀರು ಒದಗಿಸುವ ಯೋಜನೆ ಇದು. ಯೋಜನೆ 1961ರಲ್ಲಿ ಪ್ರಾರಂಭಗೊಂಡು 1972-73ರ ಸುಮಾರಿಗೆ ಪೂರ್ಣಗೊಂಡಿತು. ಈ ಜಲಾಶಯದ ಸಂಗ್ರಹ ಸಾಮರ್ಥ್ಯ 34.35 ಟಿಎಂಸಿ. ಇಲ್ಲಿಯವರೆಗೆ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು 3-4 ಬಾರಿ ಮಾತ್ರ. ಈ ನಾಲ್ಕು ದಶಕಗಳಲ್ಲಿ ಈ ಅಣೆಕಟ್ಟೆಯಲ್ಲಿ ಶೇ.40ರಷ್ಟು ಹೂಳು ತುಂಬಿದೆ ಎನ್ನುವ ಭಯಾನಕ ವರದಿ ಬಂದಿದೆ. ಹಾಗಾಗಿ ಮಹದಾಯಿ ನ್ಯಾಯಾಧಿಕರಣ ಅನುಮತಿಸಿರುವ 13.5 ಟಿಎಂಸಿ ನೀರನ್ನು ಹಿಡಿದಿಡುವುದು ಎಲ್ಲಿ? ಇನ್ನೊಂದು ಸಮಸ್ಯೆಯೆಂದರೆ ಮಲಪ್ರಭಾ ನದಿ ಕಳೆದ ಎರಡು ದಶಕದಲ್ಲಿ ಒಣಗಿ ನಿಂತದ್ದೇ ಹೆಚ್ಚು. ಹಾಗಾಗಿ ಮರಳು ಗಣಿಗಾರಿಕೆ ಮತ್ತು ಅತಿಯಾದ ಒತ್ತುವರಿಯಿಂದಾಗಿ ಕೆಲವೆಡೆ ಕಳೆದು ಹೋಗಿದೆಯೇನೋ ಎನ್ನುವಷ್ಟರ ಮಟ್ಟಿಗೆ ಸೊರಗಿದೆ. ಹಾಗೊಂದು ವೇಳೆ ಹೆಚ್ಚುವರಿ ನೀರನ್ನು ಈ ನದಿಗೆ ಹರಿಸಿದರೆ 2007, 09ರಲ್ಲಿ ಸಂಭವಿಸಿದ ಭೀಕರ ಪ್ರವಾಹ ಮರುಕಳಿಸುವುದರಲ್ಲಿ ಅನುಮಾನವಿಲ್ಲ. ಇದನ್ನು ತಪ್ಪಿಸಲು ತುರ್ತಾಗಿ ಸಮೀಕ್ಷೆ ನಡೆಸಿ ಮಲಪ್ರಭಾ ನದಿಯ ಒತ್ತುವರಿ ತೆರವುಗೊಳಿಸಬೇಕು ಮತ್ತು ಅಣೆಕಟ್ಟೆಯಲ್ಲಿನ ಹೂಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ.

ಕಾಮಗಾರಿ ಯಾವ ಹಂತದಲ್ಲಿದೆ?
ಕಳಸಾ ಹಳ್ಳಕ್ಕೆ ಚಿಕ್ಕ ಡ್ಯಾಂ ಮತ್ತು 4.8 ಕಿ.ಮೀ. ಉದ್ದದ ಕಾಲುವೆ, ಬಂಡೂರಾ ಹಳ್ಳಕ್ಕೆ ಎರಡು ಚಿಕ್ಕ ಡ್ಯಾಂ ಮತ್ತು 5.5 ಕಿ.ಮೀ. ಉದ್ದದ ಕಾಲುವೆ ನಿರ್ಮಿಸುವ 125 ಕೋಟಿ ವೆಚ್ಚದ ‘ಕಳಸಾ-ಬಂಡೂರಿ ತಿರುವು ಯೋಜನೆ’ಗೆ ಎಸ್.ಎಂ.ಕೃಷ್ಣ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ 44 ಕೋಟಿ ಅನುದಾನ ಕಾಯ್ದಿರಿಸಿತ್ತು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸರ್ಕಾರ 100 ಕೋಟಿ ತೆಗೆದಿರಿಸಿ ಕಾಮಗಾರಿಗೆ ಚಾಲನೆ ನೀಡಿದೆ. ಮುಂದೆ ಬಿ.ಎಸ್ .ಯಡಿಯೂರಪ್ಪ ಸರ್ಕಾರದಲ್ಲಿ ಕಾಮಗಾರಿ ಚುರುಕುಗೊಳಿಸಿದೆ. ನ್ಯಾಯಾಧಿಕರಣದ ತೀರ್ಪಿನ ವಿಳಂಬದಿಂದಾಗಿ ಅದರ ವೆಚ್ಚ ಈಗ 500 ಕೋಟಿಗೆ ಏರಿದೆ. ಕಾಮಗಾರಿ ಮಾತ್ರ ಇನ್ನೂ ಬಹಳಷ್ಟಿದೆ.

ಮೊದಲನೆಯದಾಗಿ ಸುಪ್ರೀಂಕೋರ್ಟಿನ ನಿರ್ದೇಶನದಂತೆ ಕಳಸಾ ಕಾಲುವೆಯಲ್ಲಿನ ಅಡ್ಡಗೋಡೆ ತೆರವುಗೊಳಿಸಬೇಕು. ಎರಡನೆಯದಾಗಿ ಕಳಸಾ, ಬಂಡೂರಾ ಕಾಲುವೆ ಮತ್ತು ಸಣ್ಣ ಡ್ಯಾಂಗಳ ನಿರ್ಮಾಣ ಕಾಮಗಾರಿಯನ್ನು ಯುದ್ಧೋಪಾದಿಯಲ್ಲಿ ಮಾಡಬೇಕಿದೆ. ಇದಕ್ಕೆ ಅಡ್ಡಿಯಾಗುವ ಪರಿಸರ ಇಲಾಖೆಯ ಅನುಮತಿ ಪಡೆಯಬೇಕಿದೆ. ವಿವಾದ ಇದ್ದಾಗ ತೋರಿದ್ದ ಆತುರವನ್ನು ಸರ್ಕಾರ ಈಗ ತೋರುವ ಮೂಲಕ ಸಾವಿರಾರು ದಿನಗಳ ಕಾಲ ಈ ನೀರಿಗಾಗಿ ಹೋರಾಡಿದ ಅನ್ನದಾತರ ಹೊಲಕ್ಕೆ ನೀರು ಹರಿಸಬೇಕಿದೆ. ಇದರ ಜತೆಯಲ್ಲೇ ಹುಬ್ಬಳ್ಳಿ-ಧಾರವಾಡ ಸೇರಿದಂತೆ ನೂರಕ್ಕೂ ಹೆಚ್ಚು ನಗರ, ಪಟ್ಟಣ, ಹಳ್ಳಿಗಳ ಕುಡಿಯುವ ನೀರಿನ ಯೋಜನೆಗಳನ್ನು ಚುರುಕುಗೊಳಿಸಬೇಕಿದೆ. ಅದರಂತೆ ನೀರಿಲ್ಲದೇ ಹಾಳಾಗಿ ಹೋಗಿರುವ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಕಾಲುವೆ, ಹೊಲಗಾಲುವೆಗಳನ್ನು ಪುನರ್ ನಿರ್ಮಿಸಬೇಕಿದೆ. ಸಾಧ್ಯವಾದಲ್ಲೆಲ್ಲಾ ಕೆರೆ ತುಂಬುವ ಯೋಜನೆಗಳನ್ನೂ ಕೈಗೆತ್ತಿಕೊಳ್ಳಬೇಕಿದೆ. ಅಣೆಯ ಹೂಳು, ನದಿಯ ವಿಸ್ತಾರ, ಯೋಜನೆಯ ಕಾಮಗಾರಿ, ಕುಡಿಯುವ ನೀರಿನ ಯೋಜನೆಗಳು, ಕೆರೆ ತುಂಬಿಸುವುದು, ಕಾಲುವೆಗಳ ಮರು ನಿರ್ಮಾಣ.. ಇತ್ಯಾದಿ ಕಾಮಗಾರಿಗಳಿಗೆ ಏನಿಲ್ಲವೆಂದರೂ ಐದಾರು ಸಾವಿರ ಕೋಟಿ ಹಣ ಬೇಕಾಗುತ್ತದೆ. ರೈತರ ಸಾಲ ಮನ್ನಾದಲ್ಲೇ ಹೈರಾಣಾಗಿರುವ ಸರ್ಕಾರ ಇಷ್ಟೊಂದು ಹಣ ನೀಡುತ್ತಾ ಎನ್ನುವ ಶಂಕೆಯೂ ರೈತರನ್ನು ಕಾಡುತ್ತಿದೆ.

ಲೇಖನ: ಮಲ್ಲಿಕಾರ್ಜುನ ಸಿದ್ದಣ್ಣವರ, ಕನ್ನಡಪ್ರಭ