ಒಹಾಯೋದಲ್ಲಿ ನಡೆಯುತ್ತಿದೆ ಭಾರತೀಯರ ಬೆದರಿಸುವ ಯತ್ನ
ವಾಷಿಂಗ್ಟನ್: ಭಾರತೀಯರ ಬಗ್ಗೆ ಅಮೆರಿಕದ ಜನರಲ್ಲಿ ದ್ವೇಷದ ಭಾವನೆ ಹೆಚ್ಚುತ್ತಿದೆ ಎಂದು ಸಾಬೀತುಪಡಿಸುವ ಘಟನೆಗಳ ನಡುವೆಯೇ ಒಹಾಯೋದಲ್ಲಿನ ಭಾರತೀಯರು ಕಳೆದ ಹಲವು ತಿಂಗಳಿನಿಂದ ಈ ಕೆಟ್ಟ ಅನುಭವ ಅನುಭವಿಸುತ್ತಿರುವುದಾಗಿ ಹೇಳಿವೆ.
ಭಾರತೀಯರನ್ನು ಕಂಡರೆ ಹಂಗಿಸುವ ಖಯಾಲಿ ಅಮೆರಿಕನ್ನರಲ್ಲಿದೆ. ಒಹಾಯೋದ ಡಬ್ಲಿನ್‌ನಲ್ಲಿರುವ ಕಾರಾ ಪಾರ್ಕ್ನಲ್ಲಿ ಇತ್ತೀಚೆಗೆ ಒಮ್ಮೆ ಭಾರತೀಯರು ಸಾಗುತ್ತಿರುವಾಗ ಅಲ್ಲಿದ್ದ ಓರ್ವ ಅಮೆರಿಕನ್ ವ್ಯಕ್ತಿ, ‘ದೋಸೆ ಸಾಂಬಾರ್ ವಾಸನೆ ಬರುತ್ತಿದೆ' ಎಂಬ ಕುಹಕದ ಮಾತುಗಳನ್ನು ಆಡಿದ್ದಾನೆ. ಅಲ್ಲದೆ, ಭಾರತೀಯರು ನಮ್ಮ ಕೆಲಸ ಕಿತ್ತುಕೊಳ್ಳುತ್ತಿದ್ದಾರೆ ಎಂಬ ವಿಡಿಯೋವನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿಕೊಂಡಿದ್ದ. ಬಳಿಕ ಭಾರತೀಯರು ಒಗ್ಗಟ್ಟಿನಿಂದ ಆತನ ವಿರುದ್ಧ ನಿಂತಾಗ ಆತ ಅಲ್ಲಿಂದ ಕಾಲಿಗೆ ಬುದ್ಧಿ ಹೇಳಿದ ಎನ್ನಲಾಗಿದೆ.
ಇದೇ ವೇಳೆ ಕಳೆದ ನವೆಂಬರ್'ನಲ್ಲಿ ಆಸ್ಪತ್ರೆಯಲ್ಲಿ ತಮ್ಮ ನವಜಾತ ಶಿಶುವನ್ನು ನೋಡಲು ಬಂದಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೂ ಇದೇ ಅನುಭವವಾಗಿದೆ. ‘ನಿಮ್ಮ ದೇಶಕ್ಕೆ ನೀವು ಹೋಗಿ' ಎಂದು ಕಾರಿನಲ್ಲಿ ಕೂತಿದ್ದ ವ್ಯಕ್ತಿಯೊಬ್ಬ ಅರಚಿದ್ದಾನೆ. ಇನ್ನು ಭಾರತೀಯರ ಕಾರಿಗೂ ಇದೇ ರೀತಿ ‘ಇದು ನಿಮಗೆ ಕಡೇ ಎಚ್ಚರಿಕೆ' ಎಂಬ ಸ್ಟಿಕ್ಕರ್ ಅಂಟಿಸಿ ಭೀತಿ ಸೃಷ್ಟಿಸುವ ಯತ್ನವೂ ನಡೆದಿದೆ.
(epaper.kannadaprabha.in)
