ಹರ್ಯಾಣ[ಜೂ.06]: ಸಾಮಾನ್ಯವಾಗಿ ರಾಜಕೀಯ ನಾಯಕರು ಅಥವಾ ಸೆಲೆಬ್ರಿಟಿಗಳನ್ನು ನೋಡಿ ಬಹಳ ಉತ್ಸುಕರಾಗುತ್ತಾರೆ. ಹೀಗಿರುವ ಆ ಕ್ಷಣಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿಯುವ ಧಾವಂತದಲ್ಲಿರುತ್ತಾರೆ. ಅವರೊಂದಿಗೆ ಸೆಲ್ಪೀ ತೆಗೆಸಿಕೊಳ್ಳಲು ಮುಗಿ ಬೀಳುತ್ತಾರೆ. ಜನರ, ಅಭಿಮಾನಿಗಳ ಖುಷಿಗಾಗಿ ಕೆಲ ರಾಜಕೀಯ ನಾಯಕರು ಹಾಗೂ ಸೆಲೆಬ್ರಿಟಿಗಳು ಖುಷಿ ಖುಷಿಯಾಗಿ ಫೋಸ್ ನೀಡುತ್ತಾರೆ. ಆದರೆ ಮತ್ತೆ ಕೆಲವರು ಇದನ್ನು ಇಷ್ಟ ಪಡುವುದಿಲ್ಲ. ಒಂದೋ ಫೋಟೋಗೆ ಫೋಸ್ ನೀಡದೆ ದೂರ ಸರಿಯುತ್ತಾರೆ ಅಥವಾ ಆ ವ್ಯಕ್ತಿಗೆ ಒಂದೆರಡು ಏಟು ಬಾರಿಸುತ್ತಾರೆ. ಇದೀಗ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೂಡಾ ತನ್ನೊಂದಿಗೆ ಸೆಲ್ಫೀ ತೆಗೆಸಿಕೊಳ್ಳಲು ಬಂದ ವ್ಯಕ್ತಿಯ ಕೈ ಹಿಡಿದು ದೂರ ತಳ್ಳಿದ್ದು, ಈ ವಿಡಿಯೋ ಭಾರೀ ವೈರಲ್ ಆಗಿದೆ.

ಹರ್ಯಾಣದ ಕರ್ನಾಲ್ ನಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಹೀಗಿರುವಾಗ ಯುವಕನೊಬ್ಬ ಸೆಲ್ಫೀ ತೆಗೆಸಿಕೊಳ್ಳಲು ಬಂದಿದ್ದಾನೆ. ಇದನ್ನು ಕಂಡು ಕೋಪಗೊಂಡ ಸಿಎಂ ಸಾಹೇಬರು ಮಾತ್ರ ಯುವಕನ ಕೈ ಜೋರಾಗಿ ಎಳೆದು ದೂರ ತಳ್ಳಿ ಬಿಟ್ಟಿದ್ದಾರೆ. ಆದರೆ ಸಿಎಂ ಹಿಂಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಅಧಿಕಾರಿಗಳು ಯುವಕನನ್ನು ಹಿಡಿದು ನಿಲ್ಲಿಸಿ ಮಾನವೀಯತೆ ಮೆರೆದಿದ್ದಾರೆ. 

ಇನ್ನು ಹರ್ಯಾಣ ಸಿಎಂ ಇಂತಹ ವರ್ತನೆ ತೋರಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು 2019ರ ಫೆಬ್ರವರಿಯಲ್ಲಿ ತನ್ನನ್ನು ಭೇಟಿಯಾಗಲು ಬಂದ ವೃದ್ಧ ದಂಪತಿಗಳ ವಿರುದ್ಧ ರೇಗಾಡಿದ್ದರು. ಈ ದಂಪತಿ ತಮಗೆ 19 ಲಕ್ಷ ಮೋಸವಾಗಿದೆ ಎಂಬ ದೂರು ಸಲ್ಲಿಸಲು ಬಂದಿದ್ದರು ಎಂಬುವುದು ಉಲ್ಲೇಖನಿಯ. ಅಂದು ಸಿಎಂ ಖಟ್ಟರ್ ನಡವಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.